ಐಪಿಎಲ್: ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 15 ರನ್ ಜಯ

ರೊಸೌ, ಪೃಥ್ವಿ ಶಾ ಅರ್ಧಶತಕ, ಲಿವಿಂಗ್‌ಸ್ಟೋನ್ ಏಕಾಂಗಿ ಹೋರಾಟ ವ್ಯರ್ಥ

Update: 2023-05-17 17:56 GMT

       ಧರ್ಮಶಾಲಾ, ಮೇ 17: ಲಿವಿಂಗ್‌ಸ್ಟೋನ್(94 ರನ್, 48 ಎಸೆತ, 5 ಬೌಂಡರಿ, 9 ಸಿಕ್ಸರ್) ಹಾಗೂ ಅಥರ್ವ ಟೈಡೆ(55 ರನ್, 42 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ ಬುಧವಾರ ನಡೆದ ಐಪಿಎಲ್‌ನ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್ ನಿಂದ ಸೋಲುಂಡಿದೆ.

  ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 214 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಅಥರ್ವ ಹಾಗೂ ಪ್ರಭ್‌ಸಿಮ್ರನ್ ಸಿಂಗ್(22 ರನ್) 2ನೇ ವಿಕೆಟ್‌ಗೆ 50 ರನ್ ಸೇರಿಸಿದರು. ಆ ನಂತರ ಲಿವಿಂಗ್‌ಸ್ಟೋನ್ ಹಾಗೂ ಅಥರ್ವ 3ನೇ ವಿಕೆಟ್‌ಗೆ 78 ರನ್ ಜೊತೆಯಾಟದಲ್ಲಿ ಭಾಗಿಯಾದರು. ಲಿವಿಂಗ್‌ಸ್ಟೋನ್ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಔಟಾಗುವ ತನಕ ಗೆಲುವಿಗಾಗಿ ಪ್ರಯತ್ನಿಸಿದರು.

    ಡೆಲ್ಲಿ ಪರ ಅನ್ರಿಚ್ ನೋರ್ಟ್ಜೆ(2-36)ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಪಂಜಾಬ್ ನಾಯಕ ಶಿಖರ್ ಧವರ್‌ರಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಲೀ ರೊಸೌ(ಔಟಾಗದೆ 82 ರನ್, 37 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಪೃಥ್ವಿ ಶಾ(54 ರನ್, 38 ಎಸೆತ, 7 ಬೌಂಡರಿ, 1 ಸಿಕ್ಸರ್)ಅರ್ಧಶತಕಗಳ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 213 ರನ್ ಗಳಿಸಲು ಶಕ್ತವಾಯಿತು.

ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ (46 ರನ್, 31 ಎಸೆತ, 5 ಬೌಂಡರಿ, 2 ಸಿಕ್ಸರ್)10.2 ಓವರ್‌ಗಳಲ್ಲಿ 94 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ವಾರ್ನರ್ ಔಟಾದ ನಂತರ ರೊಸ್ಸೌ(ಔಟಾಗದೆ 82) ಅವರೊಂದಿಗೆ ಕೈಜೋಡಿಸಿದ ಶಾ 2ನೇ ವಿಕೆಟ್‌ಗೆ 54 ರನ್ ಜೊತೆಯಾಟದಲ್ಲಿ ಭಾಗಿಯಾದರು.

ಶಾ ನಿರ್ಗಮನದ ನಂತರ ರೊಸ್ಸೌ ಹಾಗೂ ಫಿಲ್ ಸಾಲ್ಟ್(ಔಟಾಗದೆ 26 ರನ್, 14 ಎಸೆತ)3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 65 ರನ್ ಸೇರಿಸಿ ತಂಡದ ಮೊತ್ತವನ್ನು 213ಕ್ಕೆ ತಲುಪಿಸಿದರು.

ರೊಸೌ ಹಾಗೂ ಸಾಲ್ಟ್ ಅವರು ಹರ್‌ಪ್ರೀತ್ ಬ್ರಾರ್ ಎಸೆದ ಅಂತಿಮ ಓವರ್‌ನಲ್ಲಿ 23 ರನ್ ಸೂರೆಗೈದರು
ರೊಸೌ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು.

ಸ್ಯಾಮ್ ಕರನ್(2-36)ಯಶಸ್ವಿ ಬೌಲರ್ ಎನಿಸಿಕೊಂಡರು.

Similar News