×
Ad

'ದಿ ಕೇರಳ ಸ್ಟೋರಿ' ಪ್ರದರ್ಶನಕ್ಕೆ ನಿಷೇಧ ಹೇರಿದ್ದ ಪಶ್ಚಿಮ ಬಂಗಾಳ ಸರ್ಕಾರದ ಕ್ರಮಕ್ಕೆ ಸುಪ್ರೀಂ ತಡೆ

Update: 2023-05-18 17:09 IST

ಹೊಸದಿಲ್ಲಿ: ವಿವಾದಿತ ಚಲನಚಿತ್ರ 'ದಿ ಕೇರಳ ಸ್ಟೋರಿ'ಯನ್ನು ನಿಷೇಧಿಸಿ ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಇಂದು ತಡೆಯಾಜ್ಞೆ ವಿಧಿಸಿದೆ. ಅದೇ ಸಮಯ ಈ ಚಿತ್ರವು ಘಟನೆಗಳ ಕಾಲ್ಪನಿಕ ಚಿತ್ರಣ ಹಾಗೂ ಕೇರಳದಲ್ಲಿ 32,000 ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಐಸಿಸ್‌ ಸೇರುವಂತೆ ಮಾಡಲಾಗಿದೆ ಎಂಬ ಚಿತ್ರದಲ್ಲಿನ ಮಾಹಿತಿಯ ಸಮರ್ಥನೆಗೆ ಯಾವುದೇ ಅಂಕಿಅಂಶವಿಲ್ಲ ಎಂದು ಹೇಳುವ ಹಕ್ಕು ನಿರಾಕರಣೆಯನ್ನೂ ಚಿತ್ರ ಹೊಂದಿರಬೇಕು ಎಂದು ಚಿತ್ರ ತರಯಾರಕರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಈ ಚಲನಚಿತ್ರಕ್ಕೆ ಸೆನ್ಸಾರ್‌ ಮಂಡಳಿಯ ಪ್ರಮಾಣಪತ್ರ ದೊರೆತಿರುವುದರಿಂದ ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡಬೇಕು, ನಮ್ಮ ಮುಂದೆ ಇರಿಸಲಾಗಿರುವ ಸಾಕ್ಷ್ಯಗಳನ್ನು ಪರಿಗಣಿಸಿದಾಗ ಪಶ್ಚಿಮ ಬಂಗಾಳ ಸರ್ಕಾರ ಹೇರಿರುವ ನಿಷೇಧ ಸರಿಯಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್‌ ಶನಿವಾರ ಸಂಜೆ 5 ಗಂಟೆಯೊಳಗಾಗಿ ಹಕ್ಕುನಿರಾಕರಣೆಯನ್ನು ಚಿತ್ರದೊಂದಿಗೆ ಸೇರಿಸಬೇಕು ಎಂದು ಸೂಚಿಸಿದೆ.

ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ ಚಿತ್ರವನ್ನು ನಿಷೇಧಿಸದೇ ಇದ್ದರೂ ಚಿತ್ರಮಂದಿರ ಮಾಲಕರು ಸುರಕ್ಷತೆಯ ಕಾರಣ ಮುಂದೊಡ್ಡಿ ಚಿತ್ರ ಪ್ರದರ್ಶನ ನಿಲ್ಲಿಸಲು ನಿರ್ಧರಿಸಿರುವುದರಿಂದ ಚಲನಚಿತ್ರ ವೀಕ್ಷಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಚಿತ್ರದ ಸಿಬಿಎಫ್‌ಸಿ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬೇಸಿಗೆ ರಜಾಕಾಲದ ನಂತರ ಜುಲೈ ತಿಂಗಳಿನಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

Similar News