ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಅಪಹರಣದ ನಾಟಕವಾಡಿದ ಬಾಲಕಿ !

Update: 2023-05-20 11:13 GMT

ಕೋಲ್ಕತ್ತಾ: 10ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ತನ್ನ ಪೋಷಕರನ್ನು ಎದುರಿಸಲಾಗದ 16 ವರ್ಷದ ಬಾಲಕಿಯೊಬ್ಬಳು ಕೋಲ್ಕತ್ತಾದಿಂದ ತನ್ನ ಆರು ವರ್ಷದ ತಂಗಿಯೊಂದಿಗೆ ಪರಾರಿಯಾಗಿ ತಾನು ಅಪಹರಣಕ್ಕೀಡಾಗಿದ್ದೇನೆ ಎಂದು ನಾಟಕವಾಡಿರುವ ಘಟನೆ ವರದಿಯಾಗಿದೆ ಎಂದು indiatoday.in ವರದಿ ಮಾಡಿದೆ.

ಆ ಬಾಲಕಿಯು ಕೇವಲ ಅಪಹರಣದ ನಾಟಕ ಮಾತ್ರ ಆಡದೆ, ತನ್ನ ತಂದೆಯಿಂದ ಒಂದು ಕೋಟಿ ರೂಪಾಯಿ ಒತ್ತೆ ಹಣಕ್ಕೂ ಬೇಡಿಕೆ ಇಟ್ಟಿದ್ದಳು ಎಂದು ಹೇಳಲಾಗಿದೆ. ತನ್ನ ತಂದೆಗೆ ಈ ಸಂಬಂಧ ಎಸ್‌ಎಂಎಸ್ ರವಾನಿಸಿದ್ದ ಬಾಲಕಿಯು, ನಿಮ್ಮ ಮಕ್ಕಳನ್ನು ಬಿಡುಗಡೆ ಮಾಡಬೇಕಿದ್ದರೆ ಒಂದು ಕೋಟಿ ರೂಪಾಯಿ ಒತ್ತೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಳು.

ಶುಕ್ರವಾರ ಪಶ್ಚಿಮ ಬಂಗಾಳ ಪ್ರೌಢ ಶಿಕ್ಷಣ ಮಂಡಳಿಯು 10ನೇ ಮಾಧ್ಯಮಿಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿತ್ತು. ದಕ್ಷಿಣ ಕೋಲ್ಕತ್ತಾದ ಬನ್ಸ್‌ಡ್ರೋನಿ ಪ್ರದೇಶದ ಆ ಬಾಲಕಿಯೂ ಪರೀಕ್ಷೆಗೆ ಹಾಜರಾಗಿದ್ದಳು. ಫಲಿತಾಂಶ ಪ್ರಕಟವಾದ ನಂತರ ಬಾಲಕಿಯು ತನ್ನ ಆರು ವರ್ಷದ ತಂಗಿಯೊಂದಿಗೆ ಫಲಿತಾಂಶದ ಅಂಕಪಟ್ಟಿಯನ್ನು ಪಡೆಯಲು ಸೈಬರ್ ಕೆಫೆಗೆ ತೆರಳಿದ್ದಳು. ಆಕೆ ತುಂಬಾ ಸಮಯವಾದರೂ ಮರಳಿ ಬಾರದೆ ಹೋದಾಗ, ಆಕೆಯ ಪೋಷಕರು ಆಕೆಗೆ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಆಕೆ ಕರೆಯನ್ನು ಸ್ವೀಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು, ಈ ಸಂಬಂಧ ತನಿಖೆಯನ್ನು ಕೈಗೊಂಡಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುವ ಮೂಲಕ ನಾಪತ್ತೆಯಾಗಿದ್ದ ಬಾಲಕಿಯರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ನಂತರ ಶೋಧ ಕಾರ್ಯ ಕೈಗೊಂಡಿದ್ದ ಪೊಲೀಸರಿಗೆ ಸ್ಥಳೀಯ ಮೆಟ್ರೊ ನಿಲ್ದಾಣವೊಂದರ ಬಳಿ ಆಕೆಯ ಸ್ಕೂಟಿ ಪತ್ತೆಯಾಗಿದೆ.

ಈ ನಡುವೆ, ಬಾಲಕಿಯ ಪೋಷಕರು ಎಸ್‌ಎಂಎಸ್ ಒಂದನ್ನು ಸ್ವೀಕರಿಸಿದ್ದು, ಆ ಸಂದೇಶದಲ್ಲಿ ನಿಮ್ಮ ಮಕ್ಕಳನ್ನು ಅಪಹರಣ ಮಾಡಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡಲು ಒಂದು ಕೋಟಿ ರೂಪಾಯಿ ಒತ್ತೆ ಹಣ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಅಲ್ಲದೆ, ಅವರಿಗೆ ಹಣದೊಂದಿಗೆ ನೇಪಾಳ್‌ಗಂಜ್ ಪ್ರದೇಶದ ಬಳಿ ಬರಲು ಸೂಚಿಸಲಾಗಿತ್ತು.

ತನಿಖೆಯ ಸಂದರ್ಭದಲ್ಲಿ ಪೊಲೀಸರು ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಸಹೋದರಿ ಸೀಲ್ಡಾ ರೈಲ್ವೆ ನಿಲ್ದಾಣದಿಂದ ಕೃಷ್ಣಾನಗರ ಸ್ಥಳೀಯ ರೈಲು ಹತ್ತಿರಬಹುದು ಎಂದು ಶಂಕಿಸಿದ್ದಾರೆ. ನಂತರ ಸರ್ಕಾರಿ ರೈಲ್ವೆ ಪೊಲೀಸರು ಹಾಗೂ ಕೃಷ್ಣಾನಗರ ಜಿಲ್ಲಾ ಪೊಲೀಸರೊಂದಿಗೆ ಸಂವಹನ ನಡೆಸಿದ ಕೋಲ್ಕತ್ತಾ ಪೊಲೀಸರು, ನಾಪತ್ತೆಯಾಗಿರುವ ಬಾಲಕಿಯರ ಪತ್ತೆಗಾಗಿ ಅವರ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕೂಡಲೇ, ಕೃಷ್ಣಾನಗರ ಜಿಲ್ಲಾ ಪೊಲೀಸರು ಇಬ್ಬರು ಬಾಲಕಿಯರನ್ನು ನದಿಯಾ ಜಿಲ್ಲೆಯ ಡಿವೈನ್ ನರ್ಸಿಂಗ್ ಹೋಮ್ ಬಳಿ ಪತ್ತೆ ಹಚ್ಚಿದ್ದಾರೆ. ಇದರ ಬೆನ್ನಿಗೇ ಆ ಇಬ್ಬರು ಬಾಲಕಿಯರನ್ನು ರಕ್ಷಿಸಿರುವ ಪೊಲೀಸರು, ಅವರಿಬ್ಬರನ್ನೂ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.

"ವಿಚಾರಣೆಯ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯು 10ನೇ ತರಗತಿ ಪರೀಕ್ಷೆಯಲ್ಲಿ ಶೇ. 31 ಅಂಕ ಗಳಿಸಿರುವುದು ಕಂಡು ಬಂದಿತು. ಇದರಿಂದ ಬಾಲಕಿಯು ತೀವ್ರ ಬೇಸರಗೊಂಡಿದ್ದಳು. ಆಕೆ ತನ್ನ ಪೋಷಕರಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಭರವಸೆ ನೀಡಿದ್ದರೂ, ಅದರಲ್ಲಿ ವಿಫಲಳಾಗಿದ್ದಳು" ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.

ಇದಾದ ನಂತರ ತನ್ನ ತಂಗಿಯೊಂದಿಗೆ ಪರಾರಿಯಾಗಿರುವ ಬಾಲಕಿಯು ತನ್ನ ಅಪಹರಣದ ನಾಟಕವಾಡಿ, ತನ್ನ ತಂದೆಯಿಂದಲೇ ಒತ್ತೆ ಹಣ ಸುಲಿಗೆ ಮಾಡಲು ಪ್ರಯತ್ನಿಸಿರುವುದು ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

Similar News