×
Ad

ಕ್ಯಾನ್ಸರ್ ಪೀಡಿತ ಮಹಿಳೆಯ ಕೊನೆಯ ‘ಆಸೆ’ ಈಡೇರಿಸಿದ ಬಾಲಿವುಡ್ ನಟ ಶಾರುಖ್ ಖಾನ್

Update: 2023-05-24 14:40 IST

ಹೊಸದಿಲ್ಲಿ: ವಿಶ್ವದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಶಾರುಖ್ ಖಾನ್ ಕ್ಯಾನ್ಸರ್ ಪೀಡಿತ ಮಹಿಳಾ ಅಭಿಮಾನಿಯೊಬ್ಬರಿಗೆ ವೀಡಿಯೊ ಕರೆ ಮಾಡಿ ಸುಮಾರು 30 ನಿಮಿಷಗಳ ಕಾಲ ಮಾತನಾಡಿ ಅವರ ಕೊನೆಯ ಆಸೆ ಪೂರೈಸಿದ್ದಾರೆ.

ಕೋಲ್ಕತಾ ಮೂಲದ ಪ್ರಿಯಾ ಚಕ್ರವರ್ತಿ ಎಂಬುವವರ ತಾಯಿ ಶಿವಾನಿ ಚಕ್ರವರ್ತಿ(60 ವರ್ಷ)ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇದೀಗ ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಸಾಯುವ ಮೊದಲು ಶಾರುಖ್ ಖಾನ್ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ತನ್ನ ತಾಯಿಯ ಕೊನೆಯ ಆಸೆ ಈಡೇರಿಸುವ ಸಲುವಾಗಿ ಮಗಳು ಪ್ರಿಯಾ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿದ್ದರು. ಶಾರುಖ್ ಖಾನ್ ಭೇಟಿ ಮಾಡುವ ಅವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡಿದ್ದರು.

ಕೊನೆಗೂ ಅಭಿಯಾನದ ಕೋರಿಕೆಗೆ ಶಾರುಖ್ ಖಾನ್ ಸ್ಪಂದಿಸಿದ್ದಾರೆ. ವೀಡಿಯೊ ಕರೆ ಮೂಲಕ ಶಿವಾನಿ ಚಕ್ರವರ್ತಿ ಅವರ ಜೊತೆ ಸುಮಾರು 30 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಕುರಿತು ಪ್ರಿಯಾ ಚಕ್ರವರ್ತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ತಾಯಿ ಪೂರ್ಣ ಗುಣಮುಖರಾಗಲಿ ಎಂದು ಶಾರುಖ್ ಖಾನ್ ಪ್ರಾರ್ಥಿಸಿದ್ದಾರೆ. ನನ್ನ ತಾಯಿಗಾಗಿ ದುವಾ ಓದಿದರು. ನನ್ನ ಮದುವೆಗೆ ಬರುವುದಾಗಿ ತಾಯಿಗೆ ಭರವಸೆ ನೀಡಿದ್ದಾರೆ. ಅಲ್ಲದೆ ಕೋಲ್ಕತ್ತಾಗೆ ಭೇಟಿ ನೀಡಿದ ವೇಳೆ ತಾಯಿ ಮಾಡಿದ ಮೀನು ಸಾರು ಸವಿಯುವುದಾಗಿ  ಹೇಳಿದ್ದಾರೆ ಎಂದು ಪ್ರಿಯಾ ಚಕ್ರವರ್ತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕ್ಯಾನ್ಸರ್ ಪೀಡಿತ ಅಭಿಮಾನಿಯ ಜೊತೆ ಶಾರುಖ್ ಖಾನ್ ಮಾತನಾಡಿರುವ ವಿಷಯ ತಿಳಿದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಹಾಗೂ ಶಿವಾನಿ ಅವರ ವೀಡಿಯೊ ಕರೆಯ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

Similar News