ಮೊಬೈಲ್ ಸಂಖ್ಯೆ ನೀಡಲು ಗ್ರಾಹಕರನ್ನು ಒತ್ತಾಯಿಸಬೇಡಿ: ವ್ಯಾಪಾರಿಗಳಿಗೆ ಸರಕಾರ ನಿರ್ದೇಶನ
ಹೊಸದಿಲ್ಲಿ, ಮೇ 24: ಕೆಲವು ಸೇವೆಗಳನ್ನು ಒದಗಿಸಲು ತಮ್ಮ ವೈಯಕ್ತಿಕ ಸಂಪರ್ಕ ವಿವರಗಳನ್ನು ನೀಡುವಂತೆ ಗ್ರಾಹಕರನ್ನು ಒತ್ತಾಯಿಸದಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಚಿಲ್ಲರೆ ವ್ಯಾಪಾರಿಗಳಿಗೆ ನಿರ್ದೇಶ ನೀಡಿದೆ.
ಹಲವಾರು ಗ್ರಾಹಕರ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ದೇಶನವನ್ನು ಹೊರಡಿಸಲಾಗಿದೆ. ಅನೇಕ ಚಿಲ್ಲರೆ ವ್ಯಾಪಾರಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಲು ನಿರಾಕರಿಸಿದರೆ ತಮಗೆ ಸೇವೆಗಳನ್ನು ಒದಗಿಸುತ್ತಿಲ್ಲ ಎಂದು ಗ್ರಾಹಕರು ದೂರಿಕೊಂಡಿದ್ದಾರೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತಕುಮಾರ ಸಿಂಗ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್,ಗ್ರಾಹಕರು ತಮ್ಮ ವೈಯಕ್ತಿಕ ಸಂಪರ್ಕ ವಿವರಗಳನ್ನು ಒದಗಿಸುವವರೆಗೆ ಬಿಲ್ಗಳನ್ನು ಸೃಷ್ಟಿಸಲು ತಮಗೆ ಸಾಧ್ಯವಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಇದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ನ್ಯಾಯಯುತವಲ್ಲದ ಮತ್ತು ನಿರ್ಬಂಧಿತ ವ್ಯಾಪಾರ ಪದ್ಧತಿಯಾಗಿದೆ ಮತ್ತು ಗ್ರಾಹಕರ ಮಾಹಿತಿಗಳನ್ನು ಸಂಗ್ರಹಿಸುವುದರ ಹಿಂದೆ ಯಾವುದೇ ತರ್ಕಬದ್ಧತೆಯಿಲ್ಲ ಎಂದು ಹೇಳಿದರು.
ಖಾಸಗಿತನದ ಕಳವಳವೂ ಇದೆ. ಆದ್ದರಿಂದ ಗ್ರಾಹಕರ ಹಿತಾಸಕ್ತಿ ದೃಷ್ಟಿಯಿಂದ ಈ ಸಮಸ್ಯೆಯನ್ನು ಪರಿಹರಿಸಲು ಚಿಲ್ಲರೆ ಉದ್ಯಮ ಹಾಗೂ ಸಿಐಐ ಮತ್ತು ಫಿಕ್ಕಿಗೆ ಸೂಚಿಸಲಾಗಿದೆ ಎಂದರು.
ಬಿಲ್ ಸೃಷ್ಟಿಸಲು ಗ್ರಾಹಕರು ಚಿಲ್ಲರೆ ವ್ಯಾಪಾರಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡುವುದು ಭಾರತದಲ್ಲಿ ಕಡ್ಡಾಯವಲ್ಲ. ಆದಾಗ್ಯೂ ವಹಿವಾಟುಗಳನ್ನು ಪೂರ್ಣಗೊಳಿಸಲು ಮೊಬೈಲ್ ಸಂಖ್ಯೆಯನ್ನು ನೀಡುವಂತೆ ಒತ್ತಾಯಿಸುವ ಮೂಲಕ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಮೊಬೈಲ್ ಸಂಖ್ಯೆಯನ್ನು ನೀಡದಿರುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲಾಗುತ್ತಿಲ್ಲ.