ಕೇಂದ್ರ ಸರಕಾರಕ್ಕೆ 9 ವರ್ಷ: ದೇಶ ವೈಫಲ್ಯದಿಂದ ತುಂಬಿ ಹೋಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ

'ಈಗ ಜನರು ಬೇಸತ್ತಿದ್ದಾರೆ. ಇದಕ್ಕೆ ಕರ್ನಾಟಕ ಚುನಾವಣೆಯೇ ಸಾಕ್ಷಿ'

Update: 2023-05-26 07:20 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಒಂಬತ್ತು ವರ್ಷಗಳ ಆಡಳಿತದಿಂದ ದೇಶವು  ವೈಫಲ್ಯ ಹಾಗೂ  ದುಃಖದಿಂದ ತುಂಬಿ ಹೋಗಿದೆ ಎಂದು ಕಾಂಗ್ರೆಸ್ ಪಕ್ಷ ಇಂದು ವಾಗ್ದಾಳಿ ನಡೆಸಿದೆ.

ಸರಕಾರವು ತನ್ನ ಭರವಸೆಗಳನ್ನು ಈಡೇರಿಸಲಿಲ್ಲ.  ಈ ಒಂಬತ್ತು ವರ್ಷಗಳಲ್ಲಿ ಹಣದುಬ್ಬರ, ನಿರುದ್ಯೋಗ ಹಾಗೂ "ಸರ್ವಾಧಿಕಾರಿ" ನಿರ್ಧಾರಗಳ ಭಾರವನ್ನು ಜನರು ಅನುಭವಿಸಬೇಕಾಯಿತು.  ಜನರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ನೋಟು ಅಮಾನ್ಯೀಕರಣದ ಹೊರೆಗಳನ್ನು ಅನುಭವಿಸಬೇಕಾಯಿತು ಎಂದು ಕಾಂಗ್ರೆಸ್  ಆರೋಪಿಸಿದೆ.

"ಇಂದು ಮೋದಿ ಸರಕಾರ 9 ವರ್ಷಗಳನ್ನು ಪೂರೈಸಿದೆ. ಇದು '9 ವರ್ಷಗಳ ವೈಫಲ್ಯ'. ಮೋದಿ ಸರಕಾರ, ಜುಮ್ಲಾಗಳ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ. ಅದು ಒಂದೇ ಒಂದು ಭರವಸೆಯನ್ನು ಸಹ ಈಡೇರಿಸಲಿಲ್ಲ.   2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ. 2022 ರ ವೇಳೆಗೆ ಎಲ್ಲರಿಗೂ ಮನೆ ನೀಡುವ ಭರವಸೆ. ಕಪ್ಪು ಹಣ ತರುವ ಮೂಲಕ 15 ಲಕ್ಷ ರೂ. ನೀಡುವುದಾಗಿ ಭರವಸೆ. ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಭರವಸೆ" ನೀಡಿತ್ತು. ಒಂದನ್ನೂ ಈಡೇರಿಸದೆ ದಿನ ದೂಡುತ್ತಿದೆ’’  ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘’ಪ್ರಧಾನಿ ಮೋದಿಯವರು ತಮ್ಮ ಭರವಸೆಗಳನ್ನು ಈಡೇರಿಸಿಲ್ಲ, ಆದರೆ ಅವರ ಅಜ್ಞಾನದಿಂದ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.  ನೋಟು ಅಮಾನ್ಯೀಕರಣವು ಆರ್ಥಿಕತೆಯನ್ನು ನಾಶಪಡಿಸಿತು, ಜನರು ಬ್ಯಾಂಕ್  ಮುಂದೆ ಸರದಿ ಸಾಲಲ್ಲಿ ನಿಂತು  ಸತ್ತರು. ಆ ಭಯಾನಕ ದೃಶ್ಯವನ್ನು ಯಾರು ಮರೆಯಲು ಸಾಧ್ಯ?" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್‌ಟಿ) ಯಿಂದ ವ್ಯಾಪಾರಿಗಳು ನಾಶಗೊಂಡಿದ್ದಾರೆ. ಕೇಂದ್ರದ ಅಗ್ನಿವೀರ್ ಯೋಜನೆಯು ಈ ದೇಶದ ಯುವಕರ ಕನಸುಗಳನ್ನು ನುಚ್ಚುನೂರು ಮಾಡಿದೆ ಎಂದೂ ಕಾಂಗ್ರೆಸ್ ಆರೋಪಿಸಿದೆ.

ಮೋದಿ ನೇತೃತ್ವದ ಬಿಜೆಪಿ ಸರಕಾರವು ವಿಪಕ್ಷ ನಾಯಕರ ಮೇಲೆ ಫೆಡರಲ್ ಏಜೆನ್ಸಿಗಳನ್ನು ಛೂ ಬಿಡುತ್ತಿದೆ. ದನಿ ಎತ್ತುವವರನ್ನು ದಮನ ಮಾಡಿ, ತುಳಿದು, ಜೈಲಿಗೆ ಹಾಕಿ, ಬುಲ್ಡೋಝ್ ಮಾಡುತ್ತದೆ. ಈಡಿ, ಸಿಬಿಐ ಭಯ ತೋರಿಸಿ. ತನ್ನ ಸರಕಾರ ಇಲ್ಲದಿದ್ದರೆ ಹಣದ ಆಧಾರದಲ್ಲಿ ಅಧಿಕಾರ ಖರೀದಿಸಿ ಪ್ರಜಾಪ್ರಭುತ್ವವನ್ನು ಕೊಂದು ಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ..

"ಇವು 9 ವರ್ಷಗಳ ವೈಫಲ್ಯ. ಈಗ ಜನರು ಬೇಸತ್ತಿದ್ದಾರೆ. ಇದಕ್ಕೆ ಕರ್ನಾಟಕ ಚುನಾವಣೆಯೇ ಸಾಕ್ಷಿಯಾಗಿದೆ, ಅಲ್ಲಿ ಸಾರ್ವಜನಿಕರು ನೇರವಾಗಿ ಪ್ರಧಾನಿ ಮೋದಿ ಹಾಗೂ  ಅವರ ಭ್ರಷ್ಟ ಸರ್ಕಾರವನ್ನು ತಿರಸ್ಕರಿಸಿದರು. ಈ ಅಸಮಾಧಾನದ ಅಲೆಯು ದಕ್ಷಿಣದಿಂದ ಆರಂಭವಾಗಿದೆ.  ಅದು ಇಡೀ ದೇಶ ನುಂಗಿ ಹಾಕುತ್ತದೆ. ಸಾರ್ವಜನಿಕರು ಕಾಯುತ್ತಿದ್ದಾರೆ, ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ನರೇಂದ್ರ ಮೋದಿ ಅವರು ಮೇ 26, 2014 ರಂದು ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು ಹಾಗೂ  ಮೇ 30, 2019 ರಂದು ಎರಡನೇ ಅವಧಿಗೆ ಪ್ರಧಾನಿ ಹುದ್ದೆಗೆ ಏರಿದರು.

Similar News