ನೂತನ ಸಂಸತ್ ಭವನ ಪ್ರಧಾನಿ ಉದ್ಘಾಟಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Update: 2023-05-26 08:17 GMT

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸುವುದನ್ನು ಪ್ರಶ್ನಿಸಿ  ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಕುರಿತು ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಲೋಕಸಭೆಯ ಸೆಕ್ರೆಟರಿಯೇಟ್ ಹಾಗೂ  ಕೇಂದ್ರ ಸರಕಾರವು ರಾಷ್ಟ್ರಪತಿಗಳಿಗೆ ಸಮಾರಂಭಕ್ಕೆ ಆಹ್ವಾನ ನೀಡಲು ವಿಫಲರಾಗುವ ಮೂಲಕ ಅವರನ್ನು ಅವಮಾನಿಸುತ್ತಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಪ್ರಧಾನಿ ಮೋದಿ ಅವರು ರವಿವಾರದಂದು ಹೊಸ ಸಂಸತ್ತಿನ ಕಟ್ಟಡವನ್ನು ಲೋಕಾರ್ಪಣೆ ಮಾಡುವ ಕುರಿತಂತೆ ಎದ್ದಿರುವ ವಿವಾದದ ನಡುವೆ ಈ ಅರ್ಜಿ ಸಲ್ಲಿಕೆಯಾಗಿತ್ತು. ರಾಷ್ಟ್ರಪತಿಯವರನ್ನು ಕಡೆಗಣಿಸಿರುವುದನ್ನು ವಿರೋಧಿಸಿ ಕನಿಷ್ಠ 20 ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿವೆ.

ಮೇ 18ರಂದು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರು ಉದ್ಘಾಟನೆ ಕುರಿತು ನೀಡಿರುವ ಆಹ್ವಾನದ ಜತೆಗೆ ಲೋಕಸಭೆಯ ಸಚಿವಾಲಯದ ಹೇಳಿಕೆಯು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ವಕೀಲ ಜಯಾ ಸುಕಿನ್ ಅವರ ಅರ್ಜಿಯಲ್ಲಿ ವಾದಿಸಲಾಗಿದೆ.

ಭಾರತದ ಪ್ರಥಮ ಪ್ರಜೆಯಾಗಿ ಹಾಗೂ ಸಂಸತ್ತಿನ  ಮುಖ್ಯಸ್ಥರಾಗಿ ರಾಷ್ಟ್ರಪತಿ  ಪಾತ್ರವನ್ನು ಒತ್ತಿ ಹೇಳಿದ ಅರ್ಜಿದಾರರು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿಯವರನ್ನು ಭೇಟಿಯಾಗಿ ಹೊಸ ಕಟ್ಟಡವನ್ನು ಉದ್ಘಾಟಿಸಲು ಆಹ್ವಾನಿಸಿದ ನಂತರ ಈ ಅರ್ಜಿ ಸಲ್ಲಿಸಲಾಗಿತ್ತು.

Similar News