ಕೋವಿಡ್ ಆರಂಭದ ವರ್ಷದ ಆರೋಗ್ಯ ಸೂಚ್ಯಂಕದಲ್ಲಿ ಕೇರಳ, ತಮಿಳುನಾಡು, ತೆಲಂಗಾಣಕ್ಕೆ ಅಗ್ರ ಸ್ಥಾನ

Update: 2023-05-26 09:17 GMT

ಹೊಸದಿಲ್ಲಿ: ದೇಶ ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆ ಎದುರಿಸಿದ ವರ್ಷವಾದ 2020-21ರ ನೀತಿ ಆಯೋಗದ ವಾರ್ಷಿಕ  ಆರೋಗ್ಯ ಸೂಚ್ಯಂಕದಲ್ಲಿ ದೊಡ್ಡ ರಾಜ್ಯಗಳ ಪೈಕಿ ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ತೆಲಂಗಾಣ ಅಗ್ರ ಸ್ಥಾನಗಳನ್ನು ಪಡೆದುಕೊಂಡಿವೆ. ಸಣ್ಣ ರಾಜ್ಯಗಳ ಪೈಕಿ ತ್ರಿಪುರಾದ ನಿರ್ವಹಣೆ ಅತ್ಯುತ್ತಮವಾಗಿದ್ದರೆ, ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿ ಕೊನೆಯ ಸ್ಥಾನದಲ್ಲಿದೆ.

ಒಟ್ಟು 24 ಆರೋಗ್ಯ ನಿರ್ವಹಣೆ ಸೂಚಿಗಳ ಆಧಾರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸೂಚ್ಯಂಕಗಳನ್ನು ನೀತಿ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಬ್ಯಾಂಕ್ ಸಹಯೋಗದೊಂದಿಗೆ ಹೊರತರುತ್ತಿದೆ.

ಈ 2020-21ರ ಆರೋಗ್ಯ ಸೂಚ್ಯಂಕದಲ್ಲಿ ದೊಡ್ಡ ರಾಜ್ಯಗಳ ಪೈಕಿ ಕೊನೆಯ ಮೂರು ಸ್ಥಾನಗಳು ಬಿಹಾರ (19), ಉತ್ತರ ಪ್ರದೇಶ (18) ಮತ್ತು ಮಧ್ಯಪ್ರದೇಶ (17)ಕ್ಕೆ ಹೋಗಿವೆ.

ವರ್ಷದಿಂದ ವರ್ಷಕ್ಕೆ ನಿರ್ವಹಣೆಯನ್ನು ಪರಿಗಣಿಸಿದಾಗ 2019-20ಯ ನಿರ್ವಹಣೆಯ ಆಧಾರದಲ್ಲಿ ರಾಜಸ್ಥಾನ, ಉತ್ತರಾಖಂಡ ಮತ್ತು ಒಡಿಶಾ ಅಗ್ರ ಸ್ಥಾನಗಳನ್ನು ಪಡೆದುಕೊಂಡಿವೆ.

ಸಣ್ಣು ರಾ್ಜ್ಯಗಳ  ಪೈಕಿ ಒಟ್ಟಾರೆ ಅತ್ಯುತ್ತಮ ನಿರ್ವಹಣೆಯನ್ನು ತ್ರಿಪುರಾ ದಾಖಲಿಸಿದ್ದರೆ, ಸಿಕ್ಕಿಂ ಮತ್ತು ಗೋವಾ ನಂತರದ ಸ್ಥಾನಗಳನ್ನು ಹೊಂದಿವೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಣಿಪುರ ಕೊನೆಯ ಮೂರು ಸ್ಥಾನಗಳನ್ನು ಪಡೆದಿವೆ.

ಎಂಟು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಕ್ಷದ್ವೀಪ ಅತ್ಯುತ್ತಮ ನಿರ್ವಹಣೆ ತೋರಿದೆ. 2019-20ರ ಆರೋಗ್ಯ ಸೂಚ್ಯಂಕ ವರದಿಯಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಅಗ್ರ ಸ್ಥಾನಿಗಳಾಗಿದ್ದವು.

Similar News