ಆಡಳಿತಾತ್ಮಕ ಸೇವೆಗಳ ಸ್ವರೂಪ ಬದಲಾಯಿಸಲು ಕೇಂದ್ರದ ಯತ್ನ: ರಾಷ್ಟ್ರಪತಿಗೆ ಪತ್ರ ಬರೆದ ಮಾಜಿ ಅಧಿಕಾರಿಗಳು

Update: 2023-05-26 09:59 GMT

ಹೊಸದಿಲ್ಲಿ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಆಡಳಿತಾತ್ಮಕ ಸೇವೆಗಳ ಸ್ವರೂಪವನ್ನು ಬದಲಾಯಿಸಲು ಹಾಗೂ  ಸರಕಾರಕ್ಕೆ ಸಂಪೂರ್ಣವಾಗಿ ನಿಷ್ಠರಾಗಿರುವಂತೆ ಅಧಿಕಾರಿಗಳನ್ನು ಬಲವಂತಪಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ 80ಕ್ಕೂ ಅಧಿಕ ಮಾಜಿ ಐಎಎಸ್‌ ಅಧಿಕಾರಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಕಾನ್‌ಸ್ಟಿಟ್ಯೂಶನಲ್‌ ಕಾಂಡಕ್ಟ್‌ ಗ್ರೂಪ್‌ ಭಾಗವಾಗಿ ಈ ಮಾಜಿ ಅದಿಕಾರಿಗಳು ಪತ್ರೆ ಬರೆದಿದ್ದಾರೆ. “ಆಡಳಿತಾತ್ಮಕ ಸೇವೆಗಳು, ರಾಜಕೀಯ ಬದಲಾವಣೆಯಿಂದ ಬಾಧಿತವಾಗದೆ  ಸಂವಿಧಾನದ ಸುತ್ತ ಸುರಕ್ಷತಾ ಕವಚಾಗಿರಲೆಂದು ಆರಂಭಿಸಲಾಗಿದೆ. ಯಾವುದೇ ಭೀತಿ ಅಥವಾ ಪಕ್ಷಪಾತವಿಲ್ಲದೆ ಸ್ವತಂತ್ರವಾಗಿ ಅಧಿಕಾರಿಗಳು ಕಾರ್ಯಾಚರಿಸುವಂತೆ ಮಾಡಲು ಆಡಳಿತಾತ್ಮಕ ಸೇವೆಗಳನ್ನು ವಿನ್ಯಾಸಗೊಳಿಸಲಾಗಿದೆ,” ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಆದರೆ ಆಡಳಿತಾತ್ಮಕ ಸೇವೆಗಳ, ಪ್ರಮುಖವಾಗಿ ಐಎಎಸ್‌ ಮತ್ತು ಐಪಿಎಸ್‌ ಸೇವೆಗಳ ಸ್ವರೂಪವನ್ನೇ ಬದಲಾಯಿಸುವ ವ್ಯವಸ್ಥಿತ ಯತ್ನಗಳು ಪ್ರಸ್ತುತ ನಡೆಯುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ತಮ್ಮ ಗಮನಕ್ಕೆ ತರಲು ಬಯಸುವುದಾಗಿ ಈ ಮಾಜಿ ಅಧಿಕಾರಿಗಳು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳು ತಮ್ಮ ಮಾತೃ ರಾಜ್ಯದ ಕೇಡರ್‌ಗೆ ನಿಷ್ಠರಾಗಿರುವ ಬದಲು ಸಂಪೂರ್ಣವಾಗಿ ಕೇಂದ್ರ ಸರಕಾರಕ್ಕೆ ನಿಷ್ಠರಾಗಿರಬೇಕೆಂದು ಅವರಿಗೆ ಒತ್ತಡ ಹೇರುವ ಯತ್ನಗಳು ಗಮನಕ್ಕೆ ಬಂದಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಇದಕ್ಕೆ ಒಪ್ಪದ ಅಧಿಕಾರಿಗಳ ಮೇಲೆ ಇಲಾಖಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾಗೂ ಸಂಬಂಧಿತ ಅಧಿಕಾರಿಗಳು ಅಥವಾ ರಾಜ್ಯ ಸರ್ಕಾರಗಳ ಒಪ್ಪಿಗೆ ಪಡೆಯದೆಯೇ ಅಧಿಕಾರಿಗಳನ್ನು ಕೇಂದ್ರ ಡೆಪ್ಯುಟೇಶನ್‌ಗೆ ಕರೆಸುವ ಕುರಿತಂತೆ ನಿಯಮಗಳಿಗೆ ತಿದ್ದುಪಡಿ ಮಾಡಲು ಕೇಂದ್ರ ಬಯಸಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆಯಲ್ಲದೆ ಈ ಬೆಳವಣಿಗೆಯು ನಿಷ್ಪಕ್ಷಪಾತದಿಂದ ಕಾರ್ಯಾಚರಿಸುವ ಅಧಿಕಾರಿಗಳ ಸಾಮರ್ಥ್ಯಗಳನ್ನು ಕುಂದಿಸಿದೆ ಎಂದು ವಿವರಿಸಲಾಗಿದೆ.

Similar News