ಸಂಘ ಪರಿವಾರದ ನಾಯಕರಲ್ಲಿ ಗೃಹ ಸಚಿವರಿಗೇನು ಕೆಲಸ?

Update: 2023-05-29 19:30 GMT

ಮಾನ್ಯರೇ,

ರಾಜ್ಯದ ನೂತನ ಗೃಹ ಸಚಿವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಉಡುಪಿಯ ಪೇಜಾವರ ಶ್ರೀಗಳನ್ನು ಭೇಟಿಯಾಗಿರುವ ಸುದ್ದಿ ನೋಡಿ ಸಖೇದಾಶ್ಚರ್ಯವಾಯಿತು. ಗೃಹ ಸಚಿವರಾಗಿ ಪರಮೇಶ್ವರ್ ಅವರು ಕೂಡಲೇ ಗಮನ ಹರಿಸಬೇಕಾದ ಹತ್ತು ಹಲವು ಪ್ರಮುಖ ವಿಷಯಗಳಿವೆ, ಗಂಭೀರ ಸಮಸ್ಯೆಗಳಿವೆ. ಆದರೆ ಪರಮೇಶ್ವರ್ ಅವರು ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿಯ ಕಟ್ಟಾ ಬೆಂಬಲಿಗ, ಸಂಘ ಪರಿವಾರದ ಪ್ರಮುಖ ನಾಯಕ, ಧಾರ್ಮಿಕ ಗುರುಗಳ ಸ್ಥಾನದಲ್ಲಿದ್ದರೂ ಕೋಮು ವಿಭಜಕ ಹಾಗೂ ಪ್ರಚೋದನಾಕಾರಿ ಮಾತುಗಳನ್ನಾಡುವ ಪೇಜಾವರ ಶ್ರೀಗಳನ್ನು ಹೋಗಿ ಭೇಟಿಯಾಗಿದ್ದು ಯಾಕೆ? ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧ ಬಜರಂಗದಳ ನಾಯಕರಂತೆ ಮಾತಾಡಿದವರು ಈ ಸ್ವಾಮೀಜಿ. ಅವರಲ್ಲಿ ದಲಿತ ವರ್ಗದಿಂದ ಬಂದಿರುವ ಹಿರಿಯ ನಾಯಕ, ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಪರಮೇಶ್ವರ್ ಅವರಿಗೇನು ಕೆಲಸ? ಸಂಘ ಪರಿವಾರ ಹಾಗೂ ಅದರ ದ್ವೇಷ ಕಾರುವ ಸಂಘಟನೆಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಈ ರಾಜ್ಯಕ್ಕೆ ಮಾಡಿರುವ ಹಾನಿ ಬಹಳ ದೊಡ್ಡದು. ಅದರ ವಿರುದ್ಧ ಕನ್ನಡಿಗರು ಮತ ನೀಡಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಕೂಡಲೇ ಆ ವಿಭಜಕ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಬಹಳ ಮುಖ್ಯ. ಆದರೆ ಅಧಿಕಾರಕ್ಕೆ ಬಂದ ಕೂಡಲೇ 'ಪತ್ನಿ ಸಮೇತ ಅದೇ ಸಂಘ ಪರಿವಾರದ ನಾಯಕರನ್ನು ಭೇಟಿಯಾಗಿ ಆಶೀರ್ವಾದ ಪಡೆದೆ' ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಪರಮೇಶ್ವರ್ ಅವರ ನಡೆ ನಿರಾಶಾದಾಯಕವಾಗಿದೆ. ಈ ಹಿಂದಿನ ಸರಕಾರವನ್ನು ಇಳಿಸಿರುವ, ತಮ್ಮ ಸರಕಾರವನ್ನು ತಂದಿರುವ ಕನ್ನಡಿಗ ಮತದಾರ ಏನು ಬಯಸುತ್ತಿದ್ದಾನೆ ಎಂಬುದನ್ನು ಅನುಭವಿ ಆಡಳಿತಗಾರ ಪರಮೇಶ್ವರ್ ಅವರು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕಿದೆ. 

Similar News