ಅನರ್ಹರಿಗೆ ಸಿಎಂ ಕೂಡಾ ನೆರವಾಗುವಂತಿಲ್ಲ: ಪಂಜಾಬ್ ಸಿಎಂ ಆರೋಪಕ್ಕೆ ಚನ್ನಿ ತಿರುಗೇಟು

Update: 2023-06-01 03:50 GMT

ಚಂಡೀಗಢ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಜಸ್ ಇಂದರ್ ಸಿಂಗ್ ಬೈದ್ವಾನ್ ಅವರನ್ನು ಪಂಜಾಬ್ ನಾಗರಿಕ ಸೇವಾ ಹುದ್ದೆಗೆ ಆಯ್ಕೆ ಮಾಡಲು ಮಾಜಿ ಸಿಎಂ ಚನ್ನಿ ಎರಡು ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆರೋಪ ಮಾಡಿದ ಬೆನ್ನಲ್ಲೇ, ಆರೋಪ ನಿರಾಕರಿಸಿರುವ ಚರಣಜೀತ್ ಸಿಂಗ್ ಚನ್ನಿ, "ಮಾನ್ ನಮ್ಮ ಕುಟುಂಬದ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ಅನರ್ಹರಿಗೆ ಸಿಎಂ ಕೂಡಾ ನೆರವಾಗುವಂತಿಲ್ಲ" ಎಂದು ತಿರುಗೇಟು ನೀಡಿದ್ದಾರೆ.

ಚನ್ನಿ ಅವರ ಅಳಿಯ ಕ್ರಿಕೆಟಿಗನಿಂದ ಲಂಚಕ್ಕೆ ಆಗ್ರಹಿಸಿದ್ದರು ಎಂದು ಮಾನ್ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ್ದರು. ತಕ್ಷಣವೇ ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿದ ಚನ್ನಿ, ಆರೋಪ ನಿರಾಕರಿಸಿದರು. ಅರ್ಹತೆ ಇಲ್ಲದೆ ಯಾರಾದರೂ ಹೇಗೆ ಪಿಪಿಎಸ್‌ಸಿ ಹುದ್ದೆ ಗಳಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಕ್ರಿಕೆಟಿಗ ಕ್ರೀಡಾಕೋಟದಡಿ 2020ರ ಪಿಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆಯನ್ನೂ ಬರೆದಿದ್ದರು. ಆಯ್ಕೆಯಾಗಲು ವಿಫಲರಾದ ಬಳಿಕ ನ್ಯಾಯಾಲಯಕ್ಕೂ ಮೊರೆ ಹೋಗಿದ್ದರು ಎಂದು ಚನ್ನಿ ವಿವರಿಸಿದ್ದಾರೆ.

ಕ್ರಿಕೆಟಿಗನ ಅನರ್ಹತೆ ಬಗ್ಗೆ ವಿವರಿಸಿದ ಮಾಜಿ ಒಲಿಂಪಿಕ್ ಪಟು ಮತ್ತು ಕಾಂಗ್ರೆಸ್ ಮುಖಂಡ ಪರ್ಗತ್ ಸಿಂಗ್ ಅವರು, "ಐಓಸಿ ಮಾನ್ಯತೆ ಪಡೆದ ಒಲಿಂಪಿಕ್ ಕ್ರೀಡೆಗಳಿಗೆ ಮಾತ್ರ ಕ್ರೀಡಾ ಕೋಟಾ ಅನ್ವಯಿಸುತ್ತದೆ. ಪಂಜಾಬ್ ಕ್ರೀಡಾಪಟುಗಳ ನೇಮಕಾತಿ (ಮೊದಲ ತಿದ್ದುಪಡಿ) ನಿಯಮಾವಳಿ-2020ರ ಅನ್ವಯ ಕ್ರಿಕೆಟ್ ಇದರಲ್ಲಿ ಸೇರುವುದಿಲ್ಲ. ತಮ್ಮನ್ನು ಸಂಪರ್ಕಿಸಿದ ಎಲ್ಲರಿಗೂ ಸಿಎಂ ಉದ್ಯೋಗ ಮಂಜೂರು ಮಾಡುತ್ತಾ ಹೋದರೆ, ಅದು ಸಮಸ್ಯೆಗಳ ಬಾಗಿಲು ತೆರೆದಂತಾಗುತ್ತದೆ. ವ್ಯಾಜ್ಯಗಳನ್ನು ತಪ್ಪಿಸಲು ಹಲವು ಪ್ರಕರಣಗಳಲ್ಲಿ ಹೊಂದಾಣಿಕೆ ಮಾಡಬೇಕಾಗುತ್ತದೆ ಎಂದು ಚನ್ನಿ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಮಾನ್ ಸಂಪುಟದ ಸದಸ್ಯ ಲಾಲ್‌ಚಂದ್ ಕಟ್ರುಚಾಕ್ ವಿರುರ್ದದದ ಲೈಂಗಿಕ ಹಗರಣದ ಆರೋಪದಿಂದ ಮತ್ತು ಆಮ್ ಆದ್ಮಿ ಸದಸ್ಯರ ವಿರುದ್ಧದ ಹಲವು ವಿವಾದಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಮುಖ್ಯಮಂತ್ರಿಗಳು ಇಂಥ ಕೀಳು ಆರೋಪದ ತಂತ್ರ ಅನುಸರಿಸಿದ್ದಾರೆ ಎಂದು ವಿರೋಧ ಪಕ್ಷದ ಮುಖಂಡ ಪ್ರತಾಪ್ ಸಿಂಗ್ ಬಜ್ವಾ ದೂರಿದರು.

Similar News