ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಷಪ್ ಮುಲಕ್ಕಲ್ ರಾಜೀನಾಮೆ

Update: 2023-06-01 16:37 GMT

ಕೊಚ್ಚಿ: ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬಳಿಕ ದೋಷಮುಕ್ತಗೊಂಡ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರು ಜಲಂಧರ್ ಕ್ರೈಸ್ತಧರ್ಮಪ್ರಾಂತ (ಡಯೋಸಿಸ್)ದ ಪಾಸ್ಟೋರಲ್ ಕೇರ್ ಹುದ್ದೆಗೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಪೋಪ್ ಫ್ರಾನ್ಸಿಸ್ ಅವರು ಸ್ವೀಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ವಿಚಾರಣಾ ನ್ಯಾಯಲಯವು 2022ರ ಜನವರಿಯಲ್ಲಿ ದೋಷಮುಕ್ತಗೊಳಿಸಿತ್ತು. ಆದರೆ ಈ ಪ್ರಕರಣದ ಬಗ್ಗೆ ಜಲಂಧರ್ ಡಯೋಸಿಸ್ನಲ್ಲಿ ‘ವಿಭಜನಾತ್ಮಕ ಪರಿಸ್ಥಿತಿ’ಯುಂಟಾಗಿರುವ ಹಿನ್ನೆಲೆಯಲ್ಲಿ ಅವರು ಪದತ್ಯಾಗ ಮಾಡಿದ್ದಾರೆ. ಬಿಷಪ್ ಫ್ರಾಂಕೊ ಅವರನ್ನು ರಾಜೀನಾಮೆ ನೀಡುವಂತೆ ಕೋರಲಾಗಿತ್ತೆಂದು ಪೋಪ್ ಅವರ ರಾಯಭಾರಿ ಸಂಸ್ಥೆಯಾದ ದಿಲ್ಲಿಯ ‘ಅಪೊಸ್ಟೊಲಿಕ್ ನ್ಯೂನಿಸಿಯೇಚರ್’ನ ಹೇಳಿಕೆ ತಿಳಿಸಿದೆ.

ತನ್ನ ರಾಜೀನಾಮೆಯನ್ನು ಪೋಪ್ ಅವರು ಸ್ವೀಕರಿಸಿದ್ದಕ್ಕೆ ಮುಲಕ್ಕಲ್ ಸಂತಸ ವ್ಯಕ್ತಪಡಿಸಿದ್ದಾರೆ. ಚರ್ಚ್ ನಲ್ಲಿನ ತನ್ನ ಮೇಲಾಧಿಕಾರಿಗಳ ಜೊತೆ ಹಲವು ಬಾರಿ ಮಾತುಕತೆಗಳನ್ನು ನಡೆಸಿದ ಬಳಿಕ ರಾಜೀನಾಮೆ ನೀಡಿರುವುದಾಗಿ ಮುಲಕ್ಕಲ್ ಹೇಳಿದ್ದಾರೆ.

2018ರ ಜೂನ್ 29ರಂದು ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯೊಬ್ಬರು ದೂರು ನೀಡಿದ್ದರು. ದೂರು ದಾಖಲಾದ ಐದು ವರ್ಷಗಳ ಬಳಿಕ 2022ರ ಜನವರಿ 14ರಂದು ಕೊಟ್ಟಾಯಂನ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯವು ಮುಲಕ್ಕಲ್ ಅವರನ್ನು ದೋಷಮುಕ್ತಗೊಳಿಸಿತ್ತು.

Similar News