ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲ ನೀಡಿದ ಬಿಜೆಪಿ ಸಂಸದೆ

Update: 2023-06-02 03:46 GMT

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಬೀಡ್ ಕ್ಷೇತ್ರದ ಬಿಜೆಪಿ ಸಂಸದೆ ಪ್ರೀತಮ್ ಮುಂಢೆ, ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬೆಂಬಲಿಸಿ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಬೆಂಬಲಿಸಿ ಹೇಳಿಕೆ ನೀಡಿದ ಅವರು, "ಸಂಸದೆಯಾಗಿ ಅಲ್ಲ; ಒಬ್ಬ ಮಹಿಳೆಯಾಗಿ, ಇಂಥ ಗಂಭೀರ ಸ್ವರೂಪದ ಆರೋಪಗಳು ಬಂದಾಗ, ತಕ್ಷಣವೇ ಅದನ್ನು ಬಗೆಹರಿಸಬೇಕು" ಎಂದು ಸ್ಪಷ್ಟಪಡಿಸಿದರು.

"ದೂರನ್ನು ಗಂಭೀರವಾಗಿ ಪರಿಗಣಿಸದೇ ಇದ್ದಾಗ, ಅದು ಪ್ರಜಾಪ್ರಭುತ್ವದಲ್ಲಿ ಸ್ವಾಗತಾರ್ಹ ನಡೆ ಎನಿಸಿಕೊಳ್ಳುವುದಿಲ್ಲ. ಸತ್ಯ ಹೊರಬೀಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ನನ್ನ ಭಾವನೆ" ಎಂದು ಹೇಳಿದರು.

ಪ್ರೀತಮ್ ಮಂಢೆ ಅವರ ಅಕ್ಕ ಪಂಕಜಾ ಮುಂಡೆ ಒಂದು ದಿನ ಮೊದಲು ಹೇಳಿಕೆ ನೀಡಿ, "ನಾನು ಬಿಜೆಪಿಗೆ ಸೇರಿದವಳು. ಆದರೆ  ಬಿಜೆಪಿ ನನಗೆ ಸೇರಿದ್ದಲ್ಲ" ಎಂದಿದ್ದರು. ಮಾಜಿ ಕೇಂದ್ರ ಸಚಿವ ಹಾಗೂ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಗೋಪಿನಾಥ ಮುಂಢೆಯವರ ಪುತ್ರಿಯರ ಈ ಹೇಳಿಕೆ, ಬಿಜೆಪಿ ನಾಯಕತ್ವದ ಬಗ್ಗೆ ಇವರು ಸಮಾಧಾನ ಹೊಂದಿಲ್ಲ ಎಂಬ ವದಂತಿಗಳಿಗೆ ಕಾರಣವಾಗಿದೆ.

ಮುಂಢೆ ಸಹೋದರಿಯರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ ರಾವತ್, "ಮುಂಢೆ ಕುಟುಂಬವನ್ನು ತನ್ನ ಸದಸ್ಯರು ಎಂದು ಬಿಜೆಪಿ ಪರಿಗಣಿಸಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಉನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಗೋಪಿನಾಥ ಮುಂಢೆ ಅಪಾರ ಶ್ರಮ ವಹಿಸಿದ್ದರು. ಅದರೆ ಮಹಾರಾಷ್ಟ್ರ ರಾಜಕಾರಣದಲ್ಲಿ ಮಂಢೆ ಕುಟುಂಬದ ಅಸ್ತಿತ್ವವನ್ನು ಅಳಿಸಲು ರಾಜ್ಯ ಹಾಗೂ ದೆಹಲಿಯಲ್ಲಿ ಬಿಜೆಪಿ ಪ್ರಯತ್ನ ನಡೆಸುತ್ತಿದೆ" ಎಂದು ಹೇಳಿಕೆ ನೀಡಿದ್ದಾರೆ.

Similar News