ನೂತನ ಸಂಸತ್ ಕಟ್ಟಡದ ಗೋಡೆಯ ಮೇಲೆ ‘‘ಅಖಂಡ ಭಾರತ’’: ನೇಪಾಳ ರಾಜಕೀಯ ನಾಯಕರಿಂದ ಆಕ್ರೋಶ

Update: 2023-06-02 18:30 GMT

ಹೊಸದಿಲ್ಲಿ: ಇತ್ತೀಚೆಗೆ ಉದ್ಘಾಟನೆಗೊಂಡ ಭಾರತದ ನೂತನ ಸಂಸತ್ ಭವನದ ಗೋಡೆಯಲ್ಲಿ ಬಿಡಿಸಲಾದ ಭಾರತೀಯ ಉಪಖಂಡದ ಭೂಭಾಗದ ಚಿತ್ರವು ನೇಪಾಳದಲ್ಲಿ ಬಿರುಗಾಳಿ ಎಬ್ಬಿಸಿದೆ. ನೇಪಾಳದಲ್ಲಿ ಈ ಚಿತ್ರವನ್ನು ‘ಅಖಂಡ ಭಾರತ’ದ ನಕಾಶೆ ಎಂಬುದಾಗಿ ಭಾವಿಸಲಾಗಿದ್ದು, ನೇಪಾಳದ ರಾಜಕೀಯ ನಾಯಕರು ಪಕ್ಷಭೇದ ಮರೆತು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಿತ್ತಿ ಚಿತ್ರದಲ್ಲಿ ಗೌತಮ ಬುದ್ಧನ ಜನ್ಮಸ್ಥಳ ಲುಂಬಿನಿಯನ್ನು ತೋರಿಸಲಾಗಿದೆ. ಅಂದರೆ, ಲುಂಬಿನಿ ತನಗೆ ಸೇರಿದ್ದು ಎಂಬುದಾಗಿ ಭಾರತ ಹೇಳಿದಂತಾಗಿದೆ ಎನ್ನಲಾಗಿದೆ. ನೇಪಾಳವು ಲುಂಬಿನಿಯನ್ನು ತನ್ನ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳ ಪೈಕಿ ಒಂದು ಎಂಬುದಾಗಿ ಪರಿಗಣಿಸಿದೆ.

 ‘ನಂಬಿಕೆಯ ಕೊರತೆ’: ‘‘ಇತ್ತೀಚೆಗೆ ಉದ್ಘಾಟನೆಗೊಂಡ ಭಾರತದ ನೂತನ ಸಂಸತ್ ಭವನ ಕಟ್ಟಡದ ಗೋಡೆಯಲ್ಲಿ ಬಿಡಿಸಲಾಗಿರುವ ವಿವಾದಾಸ್ಪದ ‘ಅಖಂಡ ಭಾರತ’ದ ಚಿತ್ರವು, ನೇಪಾಳ ಸೇರಿದಂತೆ ನೆರೆಕರೆಯಲ್ಲಿ ಅನಗತ್ಯ ಮತ್ತು ಅಪಾಯಕಾರಿ ರಾಜತಾಂತ್ರಿಕ ವಿವಾದವನ್ನು ಸೃಷ್ಟಿಸಬಹುದು. ತನಗೆ ಹೊಂದಿಕೊಂಡಿರುವ ಹೆಚ್ಚಿನ ನೆರೆ ದೇಶಗಳೊಂದಿಗೆ ಭಾರತ ಹೊಂದಿರುವ ದ್ವಿಪಕ್ಷೀಯ ಸಂಬಂಧವು ನಂಬಿಕೆಯ ಕೊರತೆಯಿಂದಾಗಿ ಈಗಾಗಲೇ ಹಳಸುತ್ತಿದೆ. ಈಗ ಎದ್ದಿರುವ ಈ ಹೊಸ ವಿವಾದಕ್ಕೆ ಈ ನಂಬಿಕೆಯ ಕೊರತೆಯನ್ನು ಮತ್ತಷ್ಟು ಹದಗೆಡಿಸುವ ಸಾಮರ್ಥ್ಯವಿದೆ’’ ಎಂದು ನೇಪಾಳದ ಮಾಜಿ ಪ್ರಧಾನಿ ಬಾಬುರಾಮ್ ಭಟ್ಟಾರಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೇ 28ರಂದು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಿದ್ದಾಗ ಈ ಚಿತ್ರವು ಗಮನ ಸೆಳೆದಿತ್ತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮೊದಲಾಗಿ ಈ ಚಿತ್ರವನ್ನು ‘‘ಅಖಂಡ ಭಾರತ’’ ಎಂಬುದಾಗಿ ಬಣ್ಣಿಸಿದ್ದರು.

ನೇಪಾಳ ಪ್ರಧಾನಿ ಪ್ರಚಂಡ ಪ್ರಸಕ್ತ ಭಾರತ ಪ್ರವಾಸದಲ್ಲಿರುವಾಗ, ನೇಪಾಳದ ಮಾಧ್ಯಮಗಳಲ್ಲಿ ಈ ವಿಷಯ ಭಾರೀ ಚರ್ಚೆಯಾಗುತ್ತಿದೆ. ಪ್ರಚಂಡ ಗುರುವಾರ ಪ್ರಧಾನಿ ಮೋದಿಯೊಂದಿಗೆ ಅಧಿಕೃತ ಮಾತುಕತೆಗಳನ್ನು ನಡೆಸಿದರು.

ಆದರೆ, ವಿವಾದವನ್ನು ಸೇಹಯುತವಾಗಿ ಮತ್ತು ಸ್ಥಾಪಿತ ರಾಜತಾಂತ್ರಿಕ ವಿಧಾನಗಳ ಮೂಲಕ ಬಗೆಹರಿಸಲಾಗುವುದು ಎಂದು ಮೋದಿ ಮತ್ತು ಪ್ರಚಂಡ ಹೇಳಿದ್ದಾರೆ.

ಕಾಲಾಪಾನಿ ವಿವಾದ: ‘‘ಅಖಂಡ ಭಾರತ’’ ವಿವಾದವು 2019ರ ನವೆಂಬರ್‌ನಲ್ಲಿ ಭುಗಿಲೆದ್ದಿದ್ದ ಕಾಲಾಪಾನಿ ವಿವಾದದ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅಂದು ಕಾಲಾಪಾನಿ ವಲಯವನ್ನು ಉತ್ತರಾಖಂಡದ ಭಾಗವಾಗಿ ತೋರಿಸುವ ರಾಜಕೀಯ ನಕಾಶೆಯೊಂದನ್ನು ಭಾರತ ಪ್ರಕಟಿಸಿತ್ತು. ಇದಕ್ಕೆ ಪ್ರತಿಯಾಗಿ, ನೇಪಾಳವು ಕಾಲಾಪಾನಿ ವಲಯದ ಮೇಲೆ ತನ್ನ ನಿಯಂತ್ರಣವನ್ನು ಪ್ರತಿಪಾದಿಸುವ ನಕಾಶೆಯೊಂದನ್ನು ಪ್ರಕಟಿಸಿತ್ತು.

Similar News