ಖಾದ್ಯ ತೈಲ ಬೆಲೆ ಲೀಟರ್ ಗೆ ರೂ. 8-12 ಇಳಿಕೆಗೆ ಸರ್ಕಾರ ಸೂಚನೆ

Update: 2023-06-03 03:55 GMT

ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯತೈಲದ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ದೇಶದಲ್ಲೂ ಖಾದ್ಯತೈಲಗಳ ಗರಿಷ್ಠ ಮಾರಾಟ ಬೆಲೆ (ಎಂಆರ್‍ಪಿ)ಯನ್ನು ಪ್ರತಿ  ಲೀಟರ್ ಗೆ ಗೆ 8-12 ರೂಪಾಯಿ ಇಳಿಸುವಂತೆ ಕೇಂದ್ರ ಸರ್ಕಾರ ಶುಕ್ರವಾರ ಖಾದ್ಯತೈಲ ಉತ್ಪಾದಕರ ಸಂಘಗಳಿಗೆ ಸೂಚನೆ ನೀಡಿದೆ.

ಇತರ ಬ್ರಾಂಡ್‍ಗಳಿಗಿಂತ ಅಧಿಕ ಬೆಲೆ ಇರುವ, ಇನ್ನೂ ಬೆಲೆ ಕಡಿತಗೊಳಿಸದ ಬ್ರಾಂಡ್‍ಗಳ ಕಂಪನಿಗಳು ಬೆಲೆ ಇಳಿಸುವಂತೆ ಸೂಚಿಸಲಾಗಿದೆ" ಎಂದು ಆರೋಗ್ಯ ಕಾರ್ಯದರ್ಶಿ ಸಂಜೀವ್ ಛೋಪ್ರಾ ಅವರು ಉದ್ಯಮ ಪ್ರತಿನಿಧಿಗಳ ಜತೆ ನಡೆಸಿದ ಸಭೆಯ ಬಳಿಕ ಸಚಿವಾಲಯ ಪ್ರಕಟಿಸಿದೆ.

ಉತ್ಪಾದಕರು ಹಾಗೂ ರಿಫೈನರಿಗಳು ವಿತರಕರಿಗೆ ನೀಡುವ ಬೆಲೆಯನ್ನು ಕೂಡಾ ತಕ್ಷಣದಿಂದ ಜಾರಿಯಾಗುವಂತೆ ಇಳಿಸಬೇಕು. ಈ ಮೂಲಕ ಬೆಲೆ ಇಳಿಕೆಯ ಲಾಭ ಉದ್ಯಮದಿಂದ ಜನಸಾಮಾನ್ಯರ ವರೆಗೆ ಎಲ್ಲರಿಗೂ ಲಭಿಸುವಂತಾಗಬೇಕು. ಈ ಬಗ್ಗೆ ಸಚಿವಾಲಯಕ್ಕೆ ನಿಯತವಾಗಿ ಮಾಹಿತಿ ನೀಡಬೇಕು ಎಂದು ಸ್ಪಷ್ಟಪಡಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯತೈಲಗಳ ಬೆಲೆ ಇಳಿಮುಖವಾಗುತ್ತಿದ್ದು, ಖಾದ್ಯತೈಲ ಉದ್ಯಮ ಮತ್ತಷ್ಟು ಬೆಲೆ ಇಳಿಸುವ ಸೂಚನೆಗಳಿವೆ ಎಂದು ಸಚಿವಾಲಯ ಹೇಳಿದೆ. ಭಾರತೀಯ ಗ್ರಾಹಕರು ತಮ್ಮ ಖಾದ್ಯತೈಲಗಳಿಗೆ ಕಡಿಮೆ ದರ ತೆರಬೇಕಾಗುವ ನಿರೀಕ್ಷೆ ಇದೆ. ಖಾದ್ಯತೈಲಗಳ ಬೆಲೆ ಇಳಿಕೆ ಹಣದುಬ್ಬರದ ಭೀತಿಯನ್ನೂ ಕಡಿಮೆ ಮಾಡಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

Similar News