ರೈಲು ದುರಂತದ ನಂತರ ಪ್ರಧಾನಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಕ್ಯಾಮರಾಮೆನ್‌, ವೀಡಿಯೋಗ್ರಾಫರ್‌ ಉಪಸ್ಥಿತಿ!

ಜನರ ಆಕ್ರೋಶ

Update: 2023-06-03 12:24 GMT

ಹೊಸದಿಲ್ಲಿ: ಒಡಿಶಾದ ಬಾಲಾಸೋರ್‌ನಲ್ಲಿ ಶುಕ್ರವಾರ ನಡೆದ ಭೀಕರ ರೈಲು ದುರಂತದ ನಂತರ ಉನ್ನತ ಮಟ್ಟದ ಪರಿಶೀಲನಾ ಸಭೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿದೆ. ಆದರೆ ಈ ದುಃಖಕರ ಸಂದರ್ಭದಲ್ಲಿ ನಡೆದ ಸಭೆಯ ವೇಳೆಯೂ ಕ್ಯಾಮರಾಮೆನ್‌ ಮತ್ತು ವೀಡಿಯೋಗ್ರಾಫರ್‌ ಇದ್ದುದು ಜನರಲ್ಲಿ ಆಕ್ರೋಶ ಮೂಡಿಸಿದೆಯಲ್ಲದೆ ಇಂತಹ ಸಂದರ್ಭದಲ್ಲಿಯೂ ಪ್ರಧಾನಿ ಸ್ವಯಂ ಪ್ರಚಾರದತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿರುವಂತಿದೆ ಎಂದು ಆರೋಪಿಸಿದ್ದಾರೆ.

ಇಂತಹ ಒಂದು ಸಭೆಯಲ್ಲಿ ಕ್ಯಾಮೆರಾ ಸಿಬ್ಬಂದಿಯನ್ನು ನಿಯೋಜಿಸಿರುವುದು, ಸರಕಾರಿ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತೋರ್ಪಡಿಸುವ ಉದ್ದೇಶ ಹೊಂದಿದೆ ಹಾಗೂ ಪರಿಸ್ಥಿತಿಯ ಗಂಭೀರತೆಯಿಂದ ಜನರ ಗಮನವನ್ನು ಬೇರೆಡೆಗೆ ಹರಿಸುವ ಉದ್ದೇಶ ಹೊಂದಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಸಾಲದೆಂಬಂತೆ ಹಲವು ಬಿಜೆಪಿ ಪ್ರಮುಖರು ಹಾಗೂ ಸಚಿವರು ಈ ಸಭೆಯ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದೂ ಕಾಣಿಸುತ್ತದೆಯಲ್ಲದೆ ಸಂದರ್ಭದ ಲಾಭ ಗಿಟ್ಟಿಸುವ ಯತ್ನವಾಗಿದೆ ಎಂಬ ಅಭಿಪ್ರಾಯವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.

ಇಂತಹ ಪಿಆರ್‌ ತಂತ್ರಗಾರಿಕೆಗಳಿಂದ ಇಂತಹ ದುರಂತಗಳ ಸಂದರ್ಭ ಸರ್ಕಾರದ ಸ್ಪಂದನೆಯ ಮೇಲಿನ ಸಾರ್ವಜನಿಕರ ನಂಬಿಕೆ ಕಳೆದುಕೊಳ್ಳುವಂತಾಗಬಹುದೆಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Similar News