ಹಾಲಿನ ಕೋಲಾಹಲ: ಇದೀಗ ಮಧ್ಯಪ್ರದೇಶದ ಸರದಿ

Update: 2023-06-04 02:24 GMT

ಭೋಪಾಲ್: ಕರ್ನಾಟಕ ಹಾಗೂ ತಮಿಳುನಾಡಿನ ಬಳಿಕ ಇದೀಗ ಮಧ್ಯಪ್ರದೇಶದ ಹೈನು ಉದ್ಯಮ ರಣರಂಗವಾಗಿ ರೂಪುಗೊಳ್ಳುತ್ತಿದೆ. ರಾಜ್ಯದಲ್ಲಿ ಸಹಕಾರಿ ಹಾಲು ಒಕ್ಕೂಟದ ಬ್ರಾಂಡ್ ’ಸಾಂಚಿ’ ಇದೀಗ ಗುಜರಾತ್ ಮೂಲದ ಹೈನು ಬ್ರಾಂಡ್ ಆಗಿರುವ ಅಮೂಲ್‌ನಿಂದ ಪೈಪೋಟಿ ಎದುರಿಸುತ್ತಿದೆ.

ಮಧ್ಯಪ್ರದೇಶದ ಸಹಕಾರ ಹಾಲು ಒಕ್ಕೂಟ (ಎಂಪಿಸಿಡಿಎಫ್) ಬ್ರಾಂಡ್ ಸಾಂಚಿಯನ್ನು ಬಲಿಕೊಟ್ಟು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಮೂಲ್ ಹಾಗೂ ಇತರ ಬ್ರಾಂಡ್‌ಗಳನ್ನು ಉತ್ತೇಜಿಸುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಹಾಲಿನ ವಿಚಾರ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸರ್ಕಾರ ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದೆ.

ನಾವು ಸಾಂಚಿಗೆ ಹಾಲು ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಿದ್ದೇವೆ ಎಂದು ಮುಘಲಿಯಾ ಹಾತ್ ಗ್ರಾಮದ ರೈತರು ಹೇಳಿದ್ದಾರೆ. ಎರಡು ದಶಕಗಳಿಂದ ಸಾಂಚಿಗೆ ಹಾಲು ಮಾರಾಟ ಮಾಡುತ್ತಿದ್ದ ಪ್ರಹ್ಲಾದ್ ಸೇನ್ ಇದೀಗ ಪ್ರತಿ ಲೀಟರ್‌ಗೆ 40 ರಿಂದ 45 ರೂಪಾಯಿ ನೀಡುತ್ತಿರುವ ಖಾಸಗಿ ಡೈರಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ. ಸಾಂಚಿ ನೀಡುತ್ತಿರುವ 30 ರಿಂದ 32 ರೂಪಾಯಿ ದರಕ್ಕೆ ಹೋಲಿಸಿದರೆ ಇದು ಅಧಿಕ. ಅಪೇಕ್ಷಿತ ಬೆಲೆ ನಮಗೆ ಸಿಗುತ್ತಿಲ್ಲ. ಆದ್ದರಿಂದ ನಾವು ಸಾಂಚಿಗೆ ಹಾಲು ನೀಡುತ್ತಿಲ್ಲ ಎಂದು ಸೇನ್ ಸ್ಪಷ್ಟಪಡಿಸಿದ್ದಾರೆ.

ಇದೇ ಪ್ರವೃತ್ತಿ ಮುಂದುವರಿದರೆ ಸಾಂಚಿ ಉತ್ಪನ್ನಗಳು ಒಂದೇ ವರ್ಷದಲ್ಲಿ ಅಪ್ರಸ್ತುತ ಎನಿಸಲಿವೆ ಎಂದು ಮಾಜಿ ಸಹಕಾರ ಸಚಿವ ಹಾಗೂ ವಿರೋಧ ಪಕ್ಷದ ಮುಖಂಡ ಡಾ.ಗೋವಿಂದ ಸಿಂಗ್ ಹೇಳಿದ್ದಾರೆ. ಇದು ಮಧ್ಯಪ್ರದೇಶದ ಹಿತಾಸಕ್ತಿ ಬಲಿಕೊಟ್ಟು ಗುಜರಾತ್‌ಗೆ ಅನುಕೂಲ ಕಲ್ಪಿಸುವ ಸರ್ಕಾರದ ಹುನ್ನಾರ ಎಂದು ಅವರು ಟೀಕಿಸಿದ್ದಾರೆ.

ಆದರೆ ಇದನ್ನು ನಿರಾಕರಿಸಿರುವ ಹಿರಿಯ ಬಿಜೆಪಿ ಮುಖಂಡ ಹಾಗೂ ಸಹಕಾರ ಸಚಿವ ಅರವಿಂದ್ ಸಿಂಗ್ ಭಡೋರಿಯಾ, ಸೂಕ್ತವಾಗಿ ಅಧ್ಯಯನ ಮತ್ತು ಹೋಮ್‌ವರ್ಕ್ ನಡೆಸಿ ಬಳಿಕ ಹೇಳಿಕೆ ನೀಡಿ ಎಂದು ತಿರುಗೇಟು ನೀಡಿದ್ದಾರೆ. ಸಾಂಚಿ ಬ್ರಾಂಡ್ ಲಾಭದಾಯಕವಾಗಿದ್ದು, ಇದು ಮುಂದುವರಿಯಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಆದರೆ ಅಂಕಿ ಅಂಶಗಳು ಭಿನ್ನ ಕಥೆ ಹೇಳುತ್ತವೆ. 2017-18ರಲ್ಲಿ ಪ್ರತಿದಿನ 11.02 ಲಕ್ಷ ಕೆ.ಜಿ ಹಾಲು ಖರೀದಿಸುತ್ತಿದ್ದ ಎಂಪಿಸಿಡಿಎಫ್‌ನ ಖರೀದಿ ಪ್ರಮಾಣ ನಂತರದ ವರ್ಷಗಳಲ್ಲಿ ಇಳಿಕೆ ಹಾದಿಯಲ್ಲಿದೆ. 2017-18ರಲ್ಲಿ ಹೈನು ಉತ್ಪನ್ನಗಳ ಮಾರಾಟದಿಂದ ಬಂದ ಆದಾಯ 1751 ಕೋಟಿ ರೂಪಾಯಿ ಇದ್ದರೆ, ಬಳಿಕ ಆದಾಯ ಕೂಡಾ ಕುಸಿದಿದೆ.

Similar News