ಆಹಾರ ವಿತರಣಾ ಕಾರ್ಯಕ್ರಮದಲ್ಲಿ 10 ವರ್ಷದ ನಂತರ ಮತ್ತೆ ಒಂದಾದ ತಂದೆ-ಮಗ!

Update: 2023-06-04 09:56 GMT

ರಾಮಗಢ: ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಸಂಘಟನೆಯೊಂದು ಆಯೋಜಿಸಿದ್ದ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಬಡವರಿಗೆ ಊಟ ಬಡಿಸುತ್ತಿದ್ದ 13 ವರ್ಷದ ಬಾಲಕನೊಬ್ಬ ದಶಕದ ನಂತರ ತನ್ನ ತಂದೆ ಜೊತೆ ಒಂದಾಗಿರುವ ಸಿನಿಮೀಯ ಘಟನೆ ನಡೆದಿದೆ.

ಟಿಂಕು ವರ್ಮಾ ಎಂದು ಗುರುತಿಸಲಾದ ಬಾಲಕನ ತಂದೆಯನ್ನು  2013 ರಲ್ಲಿ ಆತನ ಪತ್ನಿಯ ನಿಗೂಢ ಸಾವಿನ ನಂತರ ಪೊಲೀಸರು ಬಂಧಿಸಿದ್ದರು. ವರ್ಮಾ ಶುಕ್ರವಾರ ಮಧ್ಯಾಹ್ನ ಉಚಿತ ಆಹಾರ ಸೇವಿಸಲು ಸರತಿ ಸಾಲಿನಲ್ಲಿ ಕುಳಿತಿದ್ದರು.  ಕಾಕತಾಳೀಯವೆಂಬಂತೆ ವರ್ಮಾ ಅವರ ಮಗ ಶಿವಂ ಊಟ ಬಡಿಸುತ್ತಿದ್ದ. ಶಿವಂ ತನ್ನ ತಂದೆಯನ್ನು ನೋಡಿದಾಗ ಗಡ್ಡವಿರುವ  ಮುಖವು ತನ್ನ ತಂದೆಯನ್ನು ಹೋಲುವುದನ್ನು ಗಮನಿಸಿದ್ದಾನೆ.

ತನ್ನ  ಬಂಧನದ ನಂತರ  ಸಾಮಾಜಿಕ ಸಂಘಟನೆ ಡಿವೈನ್ ಓಂಕಾರ್ ಮಿಷನ್‌ಗೆ ಹಸ್ತಾಂತರಿಸಲ್ಪಟ್ಟ ಮಗನನ್ನು ವರ್ಮಾ ಗುರುತಿಸಿದರು. ವರ್ಮಾ ಜೈಲು ಪಾಲಾದಾಗ  ಶಿವಂಗೆ ಕೇವಲ ಮೂರು ವರ್ಷವಾಗಿತ್ತು.

ಅಪ್ಪ-ಮಗ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಣ್ಣೀರಿಟ್ಟರು. ಈ ಭಾವುಕ ದೃಶ್ಯ ಸಂಸ್ಥೆಯ ವ್ಯವಸ್ಥಾಪಕ ರಾಜೇಶ್ ನೇಗಿ ಅವರ ಗಮನ ಸೆಳೆಯಿತು.

“ಶಿವಂ ತಾಯಿಯ ಸಾವಿನ ನಂತರ ಆತನ  ತಂದೆಯನ್ನು ಪೊಲೀಸರು ಬಂಧಿಸಿದ್ದರಿಂದ ಆಡಳಿತ ಅಧಿಕಾರಿಗಳು ಶಿವಂನನ್ನು ನಮ್ಮ ಸಂಸ್ಥೆಗೆ ಹಸ್ತಾಂತರಿಸಿದ್ದರು. ಆಗ ಚಿಕ್ಕ ಹುಡುಗನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ" ಎಂದು ನೇಗಿ ಹೇಳಿದರು.

ಶಿವಂನ ತಂದೆ ಪ್ರಸ್ತುತ ರಾಮಗಢ ಪಟ್ಟಣದ ವಿಕಾಸ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಹಾಗೂ  ಜೀವನೋಪಾಯಕ್ಕಾಗಿ ಆಟೋರಿಕ್ಷಾವನ್ನು ಓಡಿಸುತ್ತಿದ್ದಾರೆ. ಎಲ್ಲಾ ಅಧಿಕೃತ ವಿಧಿವಿಧಾನಗಳನ್ನು ಪೂರೈಸಿದ ನಂತರ ಶಿವಂನನ್ನು ಅವರ ತಂದೆಗೆ ಹಸ್ತಾಂತರಿಸಲಾಗಿದೆ ಎಂದು ನೇಗಿ ಹೇಳಿದರು.

"ನನ್ನ ಜೀವನದಲ್ಲಿ ನಾನು ನನ್ನ ತಂದೆಯನ್ನು ಮತ್ತೆ ಭೇಟಿಯಾಗುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ತಂದೆಯವರನ್ನು ಭೇಟಿಯಾಗಿರುವುದು ದೇವರ ಕೊಡುಗೆಗಿಂತ ಕಡಿಮೆಯಿಲ್ಲ" ಎಂದು ಸಂಸ್ಥೆ ನಡೆಸುತ್ತಿರುವ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿರುವ ಶಿವಂ ಹೇಳಿದರು.

ತನ್ನ  ಬಾಲ್ಯವನ್ನು ಕಳೆದ ಡಿವೈನ್ ಓಂಕಾರ್ ಮಿಷನ್ ಅನ್ನು ಕಳೆದುಕೊಳ್ಳುವುದಾಗಿ ಶಿವಂ ಹೇಳಿದರು. ಕಳೆದ ಹತ್ತು ವರ್ಷಗಳಿಂದ ತನ್ನ ಮಗನನ್ನು ನೋಡಿಕೊಂಡಿರುವ ಸಂಸ್ಥೆಗೆ  ವರ್ಮಾ ಧನ್ಯವಾದ ಅರ್ಪಿಸಿದರು.

Similar News