ಒಡಿಶಾ ರೈಲು ದುರಂತ: ತನಿಖಾ ಸಮಿತಿ ರಚಿಸಲು ಸುಪ್ರೀಂಕೋರ್ಟ್‌ ಗೆ ಅರ್ಜಿ

Update: 2023-06-04 10:49 GMT

ಹೊಸದಿಲ್ಲಿ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ 288 ಜನರ ಸಾವಿಗೆ ಕಾರಣವಾದ ರೈಲು ದುರಂತದ ಕಾರಣವನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್‌ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ಸ್ಥಾಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ndtv.com ವರದಿ ಮಾಡಿದೆ.

ವೃತ್ತಿಯಲ್ಲಿ ವಕೀಲರಾಗಿರುವ ವಿಶಾಲ್ ತಿವಾರಿ ಅವರು ಸಲ್ಲಿಸಿದ ಮನವಿಯಲ್ಲಿ, ರೈಲ್ವೆ ವ್ಯವಸ್ಥೆಯಲ್ಲಿನ ಅಪಾಯ ಮತ್ತು ಸುರಕ್ಷತಾ ನಿಯತಾಂಕಗಳನ್ನು ವಿಶ್ಲೇಷಿಸಲು ಮತ್ತು ಪರಿಶೀಲಿಸಲು, ಸಲಹೆ ನೀಡಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ತಾಂತ್ರಿಕ ಸದಸ್ಯರನ್ನೊಳಗೊಂಡ ತಜ್ಞರ ಆಯೋಗವನ್ನು ತಕ್ಷಣವೇ ಸ್ಥಾಪಿಸಲು ಕೇಂದ್ರಕ್ಕೆ ನಿರ್ದೇಶನಗಳನ್ನು ಕೋರಲಾಗಿದೆ. 

ಕವಚ್ ವ್ಯವಸ್ಥೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸದಿರುವುದು ಅಪಾರ ಪ್ರಮಾಣದ ಜೀವಹಾನಿ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟುಮಾಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗವು ತನ್ನ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಅಪಘಾತದ ಮೂಲ ಕಾರಣವನ್ನು ಪರಿಶೀಲಿಸಲು ಪ್ರಯತ್ನಿಸಬೇಕು ಮತ್ತು ಅದರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರೈಲ್ವೇಯಲ್ಲಿ ಸ್ವಯಂಚಾಲಿತ ರೈಲು ಸಂರಕ್ಷಣಾ (ಎಟಿಪಿ) ಸಿಸ್ಟಮ್ ಕವಚ್ ಅನುಷ್ಠಾನಕ್ಕೆ ಮಾರ್ಗಸೂಚಿಗಳನ್ನು ನೀಡುವಂತೆಯೂ ಅದು ಕೋರಿದೆ.

Similar News