ಮಹಾರಾಷ್ಟ್ರ: ಮೇಲ್ಜಾತಿಯವರಿಂದ ಅಂಬೇಡ್ಕರ್ ಜಯಂತಿ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವಕನ ಹತ್ಯೆ; ವರದಿ

Update: 2023-06-04 12:37 GMT

ಮುಂಬೈ: ಮೇಲ್ಜಾತಿಗೆ ಸೇರಿದ ಪುರುಷರ ಗುಂಪೊಂದು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಲಿತ ಯುವಕನನ್ನು ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬೋಂಧಾರ್ ಹವೇಲಿಯಲ್ಲಿ ನಡೆದಿದೆ. ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಅವರನ್ನು ಜೂ.9ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಜೂನ್ 1ರಂದು ಈ ಘಟನೆ ನಡೆದಿದೆ ಎಂದು thewire.in ವರದಿ ಮಾಡಿದೆ.

ಅಜಯ್ (ಸುರಕ್ಷತೆಯ ದೃಷ್ಟಿಯಿಂದ ಹೆಸರು ಬದಲಿಸಲಾಗಿದೆ) ಬೌದ್ಧ ಕಾಲನಿಯ ಸಮುದಾಯ ನೀರು ಪೂರೈಕೆ ಕೇಂದ್ರದ ಬಳಿ ನಿಂತುಕೊಂಡಿದ್ದಾಗ ಮರಾಠಾ ಸಮುದಾಯದ ಮದುವೆ ಮೆರವಣಿಗೆ ಬರುತ್ತಿದ್ದುದನ್ನು ನೋಡಿದ್ದ. ಗ್ರಾಮದ ಮರಾಠಾ ಸಮುದಾಯದಲ್ಲಿ ಯಾವುದೇ ಸಂಭ್ರಮಾಚರಣೆಯು ದಲಿತ ಬಡಾವಣೆಗೆ ಸಮಸ್ಯೆಯನ್ನು ಸೃಷ್ಟಿಸುವುದು ಇಲ್ಲಿ ಮಾಮೂಲಾಗಿದೆ. ಜೂ.1ರ ಸಂಜೆಯೂ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಅಜಯ್ ಬಕೆಟ್ಗಳಿಗೆ ನೀರು ತುಂಬಿಸುತ್ತಿದ್ದಾಗ ತಲವಾರುಗಳು ಮತ್ತು ಚೂರಿಗಳಿಂದ ಸಜ್ಜಿತರಾಗಿದ್ದ ಮರಾಠಾ ಪುರುಷರು ಅಬ್ಬರದ ಸಂಗೀತಕ್ಕೆ ಕುಣಿಯುತ್ತ ಗ್ರಾಮದಲ್ಲಿ ದಲಿತರನ್ನು ಮರಾಠರ ವಸತಿಯಿಂದ ಪ್ರತ್ಯೇಕಿಸುವ ಏಕೈಕ ಓಣಿಯ ಮೂಲಕ ಸಾಗುತ್ತಿದ್ದರು. ಈ ವೇಳೆ ಅಕ್ಷಯ ಭಾಲೇರಾವ್ (24) ಮತ್ತು ಆತನ ಸೋದರ ಆಕಾಶ ಜೊತೆ ಜಗಳಕ್ಕಿಳಿದ ಮರಾಠರು ಅವರಿಗೆ ಜಾತಿ ನಿಂದನೆಗಳನ್ನು ಮಾಡತೊಡಗಿದ್ದರು. ಕೆಲವೇ ಕ್ಷಣಗಳಲ್ಲಿ ಅವರು ಚೂರಿಯಿಂದ ಅಕ್ಷಯ ಹೊಟ್ಟೆಗೆ ಹಲವಾರು ಬಾರಿ ಇರಿದಿದ್ದರು. ಆಕಾಶಗೂ ಹಲವಾರು ಗಾಯಗಳಾಗಿದ್ದವು. ತನ್ನ ಪುತ್ರರ ರಕ್ಷಣೆಗೆ ದಾವಿಸಿದ್ದ ಅವರ ತಾಯಿಗೂ ಗಾಯಗಳಾಗಿದ್ದವು. ಮಧ್ಯಪ್ರವೇಶಿಸಲು ತನಗೆ ಧೈರ್ಯವಾಗಲಿಲ್ಲ. ಅವರನ್ನು ತಡೆಯುವ ಯಾರನ್ನೂ ಅವರು ಕೊಲ್ಲುತ್ತಿದ್ದರು. ಅವರು ಸಿಟ್ಟಿನಿಂದ ಹುಚ್ಚರಾಗಿದ್ದರು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಜಯ ತಿಳಿಸಿದ. ಮೆರವಣಿಗೆ ಅಲ್ಲಿಂದ ಚದುರಿದ ಬಳಿಕ ಅಜಯ್ ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯನನ್ನು ರಿಕ್ಷಾದಲ್ಲಿ ಏಳು ಕಿ.ಮೀ.ದೂರದ ನಾಂದೇಡ್ ಆಸ್ಪತ್ರೆಗೆ ಸಾಗಿಸಿದ್ದ, ಆದರೆ ಆ ವೇಳೆಗಾಗಲೇ ಆತ ಕೊನೆಯುಸಿರೆಳೆದಿದ್ದ ಎಂದು thewire.in ವರದಿ ಮಾಡಿದೆ.

ದಾಳಿಯು ಕಾಕತಾಳೀಯವಾಗಿರಲಿಲ್ಲ ಎಂದು ಅಜಯ್ ಮತ್ತು ಇತರ ಹಲವಾರು ಗ್ರಾಮಸ್ಥರು ಹೇಳಿದ್ದಾರೆ. 

ಕಟ್ಟಾ ಅಂಬೇಡ್ಕರ್ ವಾದಿಯಾಗಿದ್ದ ಅಕ್ಷಯ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಪೊಲೀಸರ ಅನುಮತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಮರಾಠಾ ಸಮುದಾಯವು ಹಲವಾರು ವರ್ಷಗಳಿಂದಲೂ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ವಿರುದ್ಧವಾಗಿದೆ. ಪೊಲೀಸರೂ ಮೇಲ್ಜಾತಿಯ ಹಿಂದುಗಳನ್ನು ಬೆಂಬಲಿಸುತ್ತಿದ್ದಾರೆ ಮತ್ತು ತಮಗೆ ಅನುಮತಿ ನೀಡಲು ನಿರಾಕರಿಸಿದ್ದರು ಎಂದು ಅನೇಕ ಗ್ರಾಮಸ್ಥರು ಆರೋಪಿಸಿದ್ದಾರೆ.

ಆದರೆ ಅಕ್ಷಯ ಇದನ್ನು ಸವಾಲಾಗಿ ತೆಗೆದುಕೊಂಡಿದ್ದ ಮತ್ತು ಎ.1ರಂದು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗಿತ್ತು. ಮೊದಲ ಬಾರಿಗೆ ಭೀಮ ಗೀತೆಯನ್ನು ಹಾಡಲಾಗಿತ್ತು ಮತ್ತು ಅಂಬೇಡ್ಕರ್ವಾದಿಗಳು ಘನತೆಯಿಂದ ಜಯಂತಿಯನ್ನು ಆಚರಿಸಲು ಸಾಧ್ಯವಾಗಿತ್ತು ಎಂದು ಪೊಲೀಸ್ ಅನುಮತಿ ಪಡೆಯುವಲ್ಲಿ ಅಕ್ಷಯಗೆ ನೆರವಾಗಿದ್ದ ನಾಂದೇಡ್ ನ ಹಿರಿಯ ಅಂಬೇಡ್ಕರ್ ವಾದಿ ಕಾರ್ಯಕರ್ತ ರಾಹುಲ್ ಪ್ರಧಾನ ತಿಳಿಸಿದರು.

ಜೂ.1ರಂದು ಅಕ್ಷಯ ಮತ್ತು ಆತನ ಕುಟುಂಬದವರ ಮೇಲೆ ದಾಳಿ ನಡೆದಾಗ ಗ್ರಾಮವನ್ನು ತಲುಪಿದ್ದ ಮೊದಲಿಗರಲ್ಲಿ ಪ್ರಧಾನ ಓರ್ವರಾಗಿದ್ದರು.

ಅಕ್ಷಯನನ್ನು ಬಲಿ ತೆಗೆದುಕೊಳ್ಳಲು ಮರಾಠಾ ಜನರು ಕಾಯುತ್ತಿದ್ದರು ಮತ್ತು ಇದು ಆತನಿಗೂ ಗೊತ್ತಿತ್ತು. ಗ್ರಾಮದಲ್ಲಿಯ ದಲಿತರು ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ಆತ ಖಚಿತಪಡಿಸಿದ್ದ,ಆದರೆ ಇದಕ್ಕಾಗಿ ತನ್ನ ಜೀವವನ್ನು ಕಳೆದುಕೊಂಡ ಎಂದು ಪ್ರಧಾನ ತಿಳಿಸಿದರು.

ಘಟನೆಯು ರಾತ್ರಿ 7:30ಕ್ಕೆ ಸಂಭವಿಸಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ಎಂದು ತಿಳಿಸಿದ ಪ್ರಧಾನ, ಪೊಲೀಸರು ಯಾವುದೇ ಆಟವಾಡದಂತೆ ನೋಡಿಕೊಳ್ಳಲು ಇತರ ಹಲವಾರು ಯುವ ಪ್ಯಾಂಥರ್ ಕಾರ್ಯಕರ್ತರೊಂದಿಗೆ ತಾನು ಠಾಣೆಯಲ್ಲಿದ್ದೆ. ರಾತ್ರಿಯಿಡೀ ಪೊಲೀಸರಿಗೆ ರಾಜಕಾರಣಿಗಳು ಮತ್ತು ಪ್ರದೇಶದ ಪ್ರಬಲ ಮರಾಠಾ ವ್ಯಕ್ತಿಗಳಿಂದ ಕರೆಗಳು ಬರುತ್ತಿದ್ದವು. ದಲಿತ ದೌರ್ಜನ್ಯದ ಪ್ರತಿ ಪ್ರಕರಣದಲ್ಲಿಯೂ ಹೀಗೆಯೇ ನಡೆಯುತ್ತದೆ ಎಂದರು.

ಪೊಲೀಸರು ಎಸ್ಸಿ/ಎಸ್ಟಿ ಕಾಯ್ದೆ,ಶಸ್ತ್ರಾಸ್ತ್ರಗಳ ಕಾಯ್ದೆ ಮತ್ತು ಐಪಿಸಿಯಡಿ 16 ವಿವಿಧ ಆರೋಪಗಳನ್ನು ಆರೋಪಿಗಳ ವಿರುದ್ಧ ಹೊರಿಸಿದ್ದು,ಹೆಚ್ಚುಕಡಿಮೆ ಎಲ್ಲ ಆರೋಪಗಳು ಜಾಮೀನುರಹಿತವಾಗಿವೆ.
ಕೇವಲ 800 ಜನರನ್ನು ಹೊಂದಿರುವ ಬೊಂಧೇರ್ ಹವೇಲಿ ಗ್ರಾಮದಲ್ಲಿ 300 ಜನರು ದಲಿತರಾಗಿದ್ದಾರೆ. ಹೆಚ್ಚಿನ ದಲಿತ ಕುಟುಂಬಗಳು ಭೂರಹಿತ ಕಾರ್ಮಿಕರಾಗಿದ್ದರೆ,ಗ್ರಾಮದಲ್ಲಿಯ ಅಂಗಡಿಗಳು ಮತ್ತು ಗ್ರಾಮಾಡಳಿತ ಮರಾಠರ ನಿಯಂತ್ರಣದಲ್ಲಿವೆ. ಹೆಚ್ಚಿನ ಮರಾಠರು ತಲವಾರು ಮತ್ತು ಚೂರಿಗಳನ್ನು ಹಿಡಿದುಕೊಂಡೇ ಸಾರ್ವಜನಿಕವಾಗಿ ತಿರುಗಾಡುತ್ತಾರೆ ಎಂದು ಸಂತ್ರಸ್ತ ಕುಟುಂಬವು ಆರೋಪಿಸಿದೆ. ಈ ಸಾಮಾಜಿಕ-ಆರ್ಥಿಕ ಅಸಮತೋಲನವು ಗ್ರಾಮದಲ್ಲಿಯ ದಲಿತರ ಮೇಲಿನ ಭಾರೀ ಹೊರೆಯಾಗಿದೆ ಎನ್ನುತ್ತಾರೆ ಅಜಯ್.

ಗ್ರಾಮದಲ್ಲಿ ಜಾತಿ ದೌರ್ಜನ್ಯದ ಹಲವಾರು ಹಿಂಸಾತ್ಮಕ ಘಟನೆಗಳು ನಡೆದಿವೆ, ಆದರೂ ಪೊಲೀಸರು ನಿರಂತರವಾಗಿ ಪ್ರಬಲರನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇತರ ಬೌದ್ಧ ಅಂಬೇಡ್ಕರವಾದಿ ಯುವಕರಂತೆ ಸರಕಾರಿ ನೌಕರಿಗೆ ಸೇರಲು ಮತ್ತು ತನ್ನ ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಬಯಸಿದ್ದ ಅಕ್ಷಯ ರಾಜ್ಯ ಪೊಲೀಸ್ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸುತ್ತಿದ್ದ. ಈಗ ಅಕ್ಷಯ ಸಾವಿನ ಬಳಿಕ ಆಕಾಶ್ಗೆ ಸರಕಾರಿ ಉದ್ಯೋಗ ಮತ್ತು ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಲಾಗುತ್ತಿದೆ.

Similar News