ನೋವು, ಜ್ವರ ನಿವಾರಕ 14 ಸ್ಥಿರ ಡೋಸ್ ಸಂಯೋಜನೆ ಔಷಧಿಗಳ ನಿಷೇಧ

Update: 2023-06-04 16:19 GMT

ಹೊಸದಿಲ್ಲಿ: ನೋವನ್ನು ನಿವಾರಿಸಲು ಮತ್ತು ಜ್ವರವನ್ನು ಕಡಿಮೆ ಮಾಡಲು ವೈದ್ಯರು ಶಿಫಾರಸು ಮಾಡುತ್ತಿರುವ ನಿಮೆಸುಲೈಡ್ ಮತ್ತು ಪ್ಯಾರಾಸಿಟಮಲ್ ಡಿಸ್ಪರ್ಸಿಬಲ್ ಮಾತ್ರೆಗಳು ಸೇರಿದಂತೆ 14 ಸ್ಥಿರ ಡೋಸ್ ಸಂಯೋಜನೆಯ ಔಷಧಿಗಳನ್ನು ಕೇಂದ್ರವು ಶುಕ್ರವಾರ ನಿಷೇಧಿಸಿದೆ.

ಸ್ಥಿರ ಡೋಸ್ ಸಂಯೋಜನೆಗಳು ಒಂದೇ ಡೋಸ್ ರೂಪದಲ್ಲಿ ಎರಡು ಅಥವಾ ಹೆಚ್ಚಿನ ಸಕ್ರಿಯ ಔಷಧಿಗಳ ಸಮ್ಮಿಶ್ರಣಗಳಾಗಿವೆ. ಈ ಔಷಧಿಗಳು ಚಿಕಿತ್ಸಕ ಗುಣವನ್ನು ಹೊಂದಿವೆ ಎನ್ನುವುದಕ್ಕೆ ಯಾವುದೇ ಸಮರ್ಥನೆಯಿಲ್ಲ ಮತ್ತು ಇವು ರೋಗಿಗಳಿಗೆ ಅಪಾಯವನ್ನೊಡ್ಡಬಹುದು ಎಂದು ತಜ್ಞರ ಸಮಿತಿಯೊಂದು ಕಂಡುಕೊಂಡಿರುವ ಹಿನ್ನೆಲೆಯಲ್ಲಿ ಸರಕಾರವು ಈ ಔಷಧಿಗಳನ್ನು ನಿಷೇಧಿಸಿದೆ.

ಕ್ಲೋಫೆನಿರಮೈನ್ ಮ್ಯಾಲಿಯೇಟ್ ಮತ್ತು ಕೊಡೈನ್ ಸಿರಪ್; ಫಾಲ್ಕೊಡೈನ್, ಪ್ರೊಮೆಥಝೈನ್, ಅಮೊಕ್ಸಿಲಿನ್ ಮತ್ತು ಬ್ರೊಮೆಕ್ಸೈನ್ ಮತ್ತು ಬ್ರೊಮೆಕ್ಸೈನ್ ಡೆಕ್ಸ್ಟ್ರೋಮೆಥಾರ್ಪಾನ್, ಅಮೋನಿಯಂ ಕ್ಲೋರೈಡ್, ಮೆಂಥಾಲ್; ಬ್ರೊಮೆಕ್ಸೈನ್ ಮತ್ತು ಫೆನೈಲ್ಫ್ರಿನ್ ಜೊತೆ ಪ್ಯಾರಾಸಿಟಮಲ್, ಕ್ಲೋರೋಫೆನಿರಮೈನ್, ಗೈಫೆನೆಸಿನ್; ಸಾಲ್ಬುಟಮಾಲ್ ಮತ್ತು ಬ್ರೊಮೆಕ್ಸೈನ್ ಇವೂ ನಿಷೇಧಿತ ಸಂಯೋಜಿತ ಔಷಧಿಗಳಲ್ಲಿ ಸೇರಿವೆ.

ತಜ್ಞರ ಸಮಿತಿ ಮತ್ತು ಔಷಧಿಗಳ ತಾಂತ್ರಿಕ ಸಲಹಾ ಮಂಡಳಿಯ ಶಿಫಾರಸುಗಳ ಆಧಾರದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ 26ಎ ಕಲಮ್ನಡಿ ನಿಷೇಧದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

Similar News