ಮ.ಪ್ರದೇಶ: ಕುದುರೆಯಿಂದ ಇಳಿಯಲು ನಿರಾಕರಿಸಿದ ದಲಿತ ವರ, ಗುಂಪಿನಿಂದ ದಿಬ್ಬಣದತ್ತ ಕಲ್ಲು ತೂರಾಟ

Update: 2023-06-06 17:51 GMT

ಛತ್ತರ್ಪುರ: ದಲಿತ ವರನೋರ್ವನನ್ನು ಆತ ಸವಾರಿ ಮಾಡುತ್ತಿದ್ದ ಕುದುರೆಯಿಂದ ಕೆಳಗಿಳಿಸುವ ಪ್ರಯತ್ನವಾಗಿ ಗುಂಪೊಂದು ಮದುವೆ ದಿಬ್ಬಣದತ್ತ ಕಲ್ಲುತೂರಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಚೌರಾಯಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಎರಡು ಪೊಲೀಸ್ ತಂಡಗಳ ಮಧ್ಯಪ್ರವೇಶದ ಬಳಿಕವೂ ಕಲ್ಲು ತೂರಾಟ ಮುಂದುವರಿದಿದ್ದು,ಮೂವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿದ್ದ ಒಬಿಸಿ ಸಮುದಾಯದ 50 ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆ ಮತ್ತು ಐಪಿಸಿಯಡಿ ಪ್ರಕರಣವನ್ನು ದಾಖಲಿಸಲಾಗಿದ್ದು,ಈ ಪೈಕಿ 20 ಜನರನ್ನು ಹೆಸರಿಸಲಾಗಿದೆ ಎಂದು ಛತ್ತರ್ಪುರ ಎಸ್ಪಿ ಅಮಿತ್ ಸಾಂಘಿ ತಿಳಿಸಿದರು.

ವರ ಸೇರಿದಂತೆ ಸುಮಾರು 50 ಜನರಿದ್ದ ದಿಬ್ಬಣ ಸಾಗರ ಜಿಲ್ಲೆಯ ಶಹಗಡದಲ್ಲಿಯ ವಧುವಿನ ಮನೆಗೆ ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ಗ್ರಾಮಸ್ಥರ ಗುಂಪೊಂದು ವರ ಕುದುರೆ ಸವಾರಿ ಮಾಡುವುದನ್ನು ತಡೆಯಲು ಪ್ರಯತ್ನಿಸಿತ್ತು. ವರ ಕುದುರೆಯಿಂದ ಇಳಿಯಲು ನಿರಾಕರಿಸಿದಾಗ ಕುಪಿತ ಗುಂಪು ಮೆರವಣಿಗೆಯ ಮೇಲೆ ಕಲ್ಲು ತೂರಾಟ ಆರಂಭಿಸಿತ್ತು.

ಕೆಲವು ಗಂಟೆಗಳ ಬಳಿಕ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದ ಪೊಲೀಸರು ಮೆರವಣಿಗೆಗೆ ರಕ್ಷಣೆಯನ್ನು ಒದಗಿಸಿದ್ದು,ಅದು ತಡರಾತ್ರಿ ವಧುವಿನ ಮನೆಯನ್ನು ತಲುಪಿತ್ತು.

Similar News