ಚಾರ್ ಧಾಮ್ ಯಾತ್ರೆ: 45 ದಿನಗಳಲ್ಲಿ 119 ಯಾತ್ರಿಕರು ಮೃತ್ಯು

Update: 2023-06-07 02:59 GMT

ಡೆಹ್ರಾಡೂನ್: ಚಾರ್‍ಧಾಮ ಯಾತ್ರೆಯ ಪ್ರಸಕ್ತ ಋತುವಿನಲ್ಲಿ ತೀವ್ರ ಹವಾಮಾನ ಪರಿಸ್ಥಿತಿ, ಕಠಿಣವಾದ ಕಂದಕಗಳ ಪ್ರಯಾಣ ಹಾಗೂ ಸಹ ಅಸ್ವಸ್ಥತೆಯ ಅಂಶಗಳ ಕಾರಣದಿಂದ ಮೊದಲ 45 ದಿನಗಳಲ್ಲಿ 119 ಮಂದಿ ಯಾತ್ರಿಗಳು ಮೃತಪಟ್ಟಿದ್ದಾರೆ. ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳಗಳಿಗೆ ಏಪ್ರಿಲ್ 22ರಂದು ಯಾತ್ರೆ ಆರಂಭವಾಗಿತ್ತು. ಈ ಅವಧಿಯಲ್ಲಿ ಸುಮಾರು 20 ಲಕ್ಷ ಯಾತ್ರಿಗಳು ಭೇಟಿ ನೀಡಿದ್ದು, ಸುಮಾರು 2.1 ಲಕ್ಷ ಮಂದಿ ಆರೋಗ್ಯ ಇಲಾಖೆ ಒದಗಿಸುತ್ತಿರುವ ಚಿಕಿತ್ಸಾ ಸೇವೆಯ ಪ್ರಯೋಜನ ಪಡೆದಿದ್ದಾರೆ.

ಈ ಬಾರಿ ಮೇ ತಿಂಗಳವರೆಗೂ ಹಿಮಾಲಯದ ಈ ಪವಿತ್ರ ಧಾಮಗಳಲ್ಲಿ ಮಳೆ ಹಾಗೂ ಹಿಮಪಾತ ಕಂಡುಬಂದಿತ್ತು. ಇದರ ಪರಿಣಾಮವಾಗಿ ಹೃದಯ ಸ್ತಂಭನ ಹಾಗೂ ಹೃದಯ ನಾಳದ ಸಮಸ್ಯೆಗಳು ಯಾತ್ರಿಕರ ಸಾವಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಅಂಕಿ ಅಂಶಗಳ ಪ್ರಕಾರ ಸೋಮವಾರದ ವರೆಗೆ, ಕೇದಾರನಾಥ ಯಾತ್ರೆಯ ವೇಳೆ 58 ಮಂದಿ ಯಾತ್ರಿಕರು ಅಸು ನೀಗಿದ್ದಾರೆ. ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ್‍ನಿಂದ ಆಗಮಿಸಿದ ಯಾತ್ರಿಕರು ಹೆಚ್ಚಾಗಿ ಮೃತಪಟ್ಟಿದ್ದಾರೆ. 11775 ಅಡಿ ಎತ್ತರದ ದೇವಾಲಯಕ್ಕೆ ಭೇಟಿ ನೀಡಲು ಚಾರಣ ಮಾಡುವ ವೇಳೆ 2500ಕ್ಕೂ ಹೆಚ್ಚು ಮಂದಿ ಉಸಿರಾಟದ ತೊಂದರೆ ಅನುಭವಿಸಿದ್ದರಿಂದ ಕೃತಕ ಆಮ್ಲಜನಕ ನೆರವು ನೀಡಲಾಗಿದೆ ಎಂದು ತಿಳಿದು ಬಂದಿದೆ.

Similar News