ಹೊಸ ಸರಕಾರ ಹಳೆಯ ಬಾಕಿ ತೀರಿಸಲಿ

Update: 2023-06-07 18:33 GMT

ಮಾನ್ಯರೇ,

ಹೊಸ ಸರಕಾರ ಬಂದು ಹೊಸ ಬಜೆಟ್ ಮಂಡನೆಯಾಗುತ್ತಿದೆ. ಈ ಹೊತ್ತಿನಲ್ಲಿ, ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ (ಕೆಸಾಪ್ಸ್) ಕೆಲವು ಜಿಲ್ಲೆಯ ದಮನಿತರ ಎನ್‌ಜಿಒ ಹಾಗೂ ಸಿಬಿಒ (ಸಮುದಾಯ ಆಧಾರಿತ ಸಂಸ್ಥೆಗಳು) 2015-16ರಲ್ಲಿ ಏಡ್ಸ್ ನಿಯಂತ್ರಣ ಯೋಜನೆಗಾಗಿ(ಐಊಖ
) ಮಾಡಿಕೊಟ್ಟ ಕೆಲಸಕ್ಕೆ, ಅಂದಾಜು ರೂ. ಹತ್ತು ಕೋಟಿಯಷ್ಟು ಬಾಕಿ ಉಳಿಸಿಕೊಂಡ ಬಗ್ಗೆ ನೆನಪಿಸಲು ಬಯಸುತ್ತಿರುವೆ. ಏಡ್ಸ್ ನಿಯಂತ್ರಣ ಮಂಡಳಿಯಡಿ ಯೋಜನೆಯ ಅನುಷ್ಠಾನಕ್ಕಾಗಿ ಕಾರ್ಯ ನಿರ್ವಹಿಸುವ ಸಿಬಿಒ ಸದಸ್ಯರು ಆರ್ಥಿಕವಾಗಿ ಅತ್ಯಂತ ಸಂಕಷ್ಟದಲ್ಲಿರುವವರು ಹಾಗೂ ಯೋಜನೆಯ ಅನುಷ್ಠಾನ ವ್ಯವಸ್ಥೆಗಾಗಿ ಅಪಾರ ಪ್ರಮಾಣದ ಸಾಲ ಮಾಡಿಕೊಂಡಿದ್ದಾರೆ. 2015-16ರಲ್ಲಿ ಅನೇಕ ಜಿಲ್ಲೆಯ ಈ ಸಿಬಿಒಗಳು ನಿರ್ವಹಿಸಿದ ಕೆಲಸಕ್ಕೆ 7-8 ವರ್ಷಗಳಿಂದಲೂ, ಎಷ್ಟೆಲ್ಲಾ ಹೋರಾಟ ನಡೆಸಿದರೂ, ಪ್ರತೀ ಘಟಕಕ್ಕೆ ಲಕ್ಷಾಂತರ ರೂ.ಗಳ ಬಾಕಿ ಇನ್ನೂ ಪಾವತಿಯಾಗಿಲ್ಲ. ಈ ಅವಧಿಯಲ್ಲಿ ಸಿದ್ದರಾಮಯ್ಯನವರದ್ದೇ ಸರಕಾರವಿತ್ತು. ಇಷ್ಟೂ ವರ್ಷಗಳಲ್ಲಿ ಈ ದಮನಿತರು, ಸಾಲಗಾರರ ಒತ್ತಡಕ್ಕೆ ಸಿಕ್ಕು ಜರ್ಜರಿತರಾಗಿ, ಅತ್ಯಂತ ಹೀನಾಯ ಸ್ಥಿತಿಯನ್ನು ತಲುಪಿದ್ದು, ಕೆಲವರು ಮರಣವನ್ನೂ ಹೊಂದಿದ್ದಾರೆ. ಹೀಗಾಗಿ ಪ್ರಥಮ ಆದ್ಯತೆಯಾಗಿ ಈ ಸಿಬಿಒಗಳ ಬಾಕಿ ಹಣವನ್ನು ಹಿಂದಿರುಗಿಸುವ ವ್ಯವಸ್ಥೆಯನ್ನು ರಾಜ್ಯ ಸರಕಾರವು ತುರ್ತಾಗಿ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇನೆ.
ಹಾಗೇ ಈ ಹಿಂದೆ ಸಿದ್ದರಾಮಯ್ಯನವರದೇ ಸರಕಾರವಿದ್ದಾಗ ಮಹಿಳೆಯರ ಸುರಕ್ಷತೆಯ ಹಿತದೃಷ್ಟಿಯಿಂದ ತಜ್ಞರು, ಪರಿಣಿತರನ್ನೊಳಗೊಂಡು ವಿಧಾನ ಪರಿಷತ್ ಸದಸ್ಯರಾಗಿದ್ದ ವಿ.ಎಸ್.ಉಗ್ರಪ್ಪಅವರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಅತ್ಯಾಚಾರ ತಡೆ ಅಧ್ಯಯನ ಸಮಿತಿ ನೀಡಿದ್ದ ವರದಿಯಲ್ಲಿದ್ದ 135 ಶಿಫಾರಸುಗಳು ಹಾಗೂ ಇನ್ನೋರ್ವ ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ ಸಮಿತಿ ನೀಡಿದ್ದ ವರದಿಯಲ್ಲಿದ್ದ 60ಕ್ಕೂ ಹೆಚ್ಚು ಪ್ರಮುಖ ಶಿಫಾರಸುಗಳು ಒಂದಿಷ್ಟೂ ಅನುಷ್ಠಾನಗೊಳ್ಳದೆ ಹಾಗೆಯೇ ಉಳಿದು ಹೋಗಿವೆ. ಇವನ್ನು ಜಾರಿಗೊಳಿಸಲು ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣವನ್ನು ಮೀಸಲಿರಿಸಿ ತಕ್ಷಣವೇ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂದೂ ಈ ಮೂಲಕ ಆಗ್ರಹಿಸುತ್ತಿದ್ದೇನೆ.
 

Similar News