ನೂರಾರು ಜೀವಗಳನ್ನು ಉಳಿಸಿದ್ದ ಗುಜರಾತ್ ಹೃದ್ರೋಗ ತಜ್ಞ ಹೃದಯಾಘಾತದಿಂದ ನಿಧನ

Update: 2023-06-08 05:02 GMT

ಜಾಮ್‌ನಗರ(ಗುಜರಾತ್): ಗುಜರಾತ್‌ನ ಜಾಮ್‌ನಗರದ  41 ವರ್ಷದ ಖ್ಯಾತ ಹೃದ್ರೋಗ ತಜ್ಞ ಡಾ.ಗೌರವ್ ಗಾಂಧಿ ಅವರು ಇಲ್ಲಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹಾಗೂ ಸಹೋದ್ಯೋಗಿ ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ ಡಾ.ಗಾಂಧಿಯವರ ಹಠಾತ್ ನಿಧನವು ನಗರವನ್ನು  ಆಘಾತ ಮತ್ತು ದುಃಖದ ಸ್ಥಿತಿಗೆ ತಲುಪಿಸಿದೆ. ನೂರಾರು ಹಿತೈಷಿಗಳು  ಸಂಜೆ ಅವರ ಅಂತಿಮ ಯಾತ್ರೆಯಲ್ಲಿ ಭಾಗಿಯಾದರು. ಹೆಚ್ಚಿನ ಸಂಖ್ಯೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ ವೈದ್ಯರಿಗೆ ಗೌರವ ಸಲ್ಲಿಸಿದರು.

"ಡಾ. ಗೌರವ್ ಗಾಂಧಿ ಅವರು ಹೆಚ್ಚಿನ ಸಂಖ್ಯೆಯ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ" ಎಂದು ಅವರು ಕೆಲಸ ಮಾಡುತ್ತಿದ್ದ ಗುರು ಗೋವಿಂದಸಿಂಹ ಸರಕಾರಿ ಆಸ್ಪತ್ರೆಯ ಡಾ.ಎಚ್.ಕೆ.ವಾಸವಾಡ ಹೇಳಿದರು.

ಹೃದ್ರೋಗ ತಜ್ಞ ದಿನೇಶ್ ಗಾಂಧಿ ಅವರು ಹೃದಯಾಘಾತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಇಂತಹ ಧೀಮಂತ ಯುವ ವೈದ್ಯ ನಮ್ಮೊಂದಿಗಿಲ್ಲದಿರುವುದು ಜಾಮ್‌ನಗರದ ವೈದ್ಯಲೋಕಕ್ಕೆ ಅತೀವ ಆಘಾತ  ಹಾಗೂ  ದುಃಖ ತಂದಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು  ಡಾ. ವಾಸವಾಡ ಹೇಳಿದರು.

ಅವರ ಸಂಬಂಧಿಕರು ಹಾಗೂ   ಸ್ನೇಹಿತರ ಪ್ರಕಾರ, ಡಾ. ಗಾಂಧಿ ಅವರು ಪ್ರಾಕ್ಟೀಸ್  ಮಾಡುತ್ತಿದ್ದ ಖಾಸಗಿ ಶಾರದಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ನಂತರ ಸೋಮವಾರ ರಾತ್ರಿ ಮನೆಗೆ ಬಂದರು. ಊಟ ಮಾಡಿ ಮಲಗಿದ್ದರು.

ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕಂಡು ಕುಟುಂಬಸ್ಥರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಅವರನ್ನು ಜಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರ ಜೀವ ಉಳಿಸಲು ಪ್ರಯತ್ನಿಸಿದರು, ಆದರೆ ವಿಫಲರಾದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಡಾ.ಗಾಂಧಿ ಅವರು ತಮ್ಮ ವೃದ್ಧ ತಂದೆ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

1982 ರಲ್ಲಿ ಜನಿಸಿದ್ದ ಡಾ. ಗಾಂಧಿ ಅವರು ಹೆಸರಾಂತ ಹೃದಯ ಶಸ್ತ್ರಚಿಕಿತ್ಸಕರಾಗಿದ್ದರು ಹಾಗೂ  ನೂರಾರು ಆಂಜಿಯೋಗ್ರಫಿ ಹಾಗೂ  ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ  ಹೆಸರುವಾಸಿಯಾಗಿದ್ದಾರೆ.

Similar News