ರೈಲು ದುರಂತದಲ್ಲಿ ಮೃತಪಟ್ಟವರ ಕಳೇಬರಗಳನ್ನು ಇರಿಸಲಾಗಿದ್ದ ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿರುವ ವಿದ್ಯಾರ್ಥಿಗಳು

Update: 2023-06-08 14:44 GMT

ಬಾಲಾಸೋರ್: ಕಳೆದ ವಾರ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರ ಮೃತದೇಹಗಳನ್ನು ಒಡಿಶಾದ ಬಹಾನಗ ಹೈಸ್ಕೂಲಿನಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಶವಾಗಾರದಲ್ಲಿ ಇರಿಸಲಾಗಿತ್ತು. ದುರಂತ ಜೂನ್‌ 2 ರಂದು ಸಂಭವಿಸಿದ ನಂತರ ರಕ್ಷಣಾ ಕಾರ್ಯಾಚರಣೆ ವೇಳೆ ದೊರೆತ ಮೃತದೇಹಗಳನ್ನು ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಈಗ ಮಕ್ಕಳು ಈ ಶಾಲೆಗೆ ಹೋಗಲು ಭಯಪಡುತ್ತಿದ್ದು ಶಾಲಾಡಳಿತವು ಈ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಸರಕಾರವನ್ನು ಕೋರಿದೆ.

ಮಕ್ಕಳ ಭೀತಿಯನ್ನು ಕಂಡು ಶಾಲಾಡಳಿತವು ಅಲ್ಲಿ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸಿ ವಿದ್ಯಾರ್ಥಿಗಳ ಭಯವನ್ನು ಹೋಗಲಾಡಿಸಲು ಮುಂದಾಗಿದೆ ಎಂದು ವರದಿಯಾಗಿದೆ. 

ಶಾಲಾ ಕಟ್ಟಡದಲ್ಲಿರಿಸಲಾಗಿದ್ದ ಮೃತದೇಹಗಳ ಚಿತ್ರಣಗಳ ವೀಡಿಯೋವನ್ನು ಟಿವಿಯಲ್ಲಿ ನೋಡಿದ ಮಕ್ಕಳು ಭಯಭೀತರಾಗಿದ್ದಾರೆ ಎಂದು ಆಡಳಿತ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.

ಮೃತದೇಹಗಳನ್ನು ಇಲ್ಲಿಂದ ಸಾಗಿಸಿದ ನಂತರ ಶಾಲಾ ಕ್ಯಾಂಪಸ್ಸನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಆರಂಭದಲ್ಲಿ ಶಾಲೆಯ ಮೂರು ತರಗತಿ ಕೊಠಡಿಗಳನ್ನು ಮಾತ್ರ ಮೃತದೇಹಗಳನ್ನಿರಿಸಲು ನೀಡಲಾಗಿದ್ದರೆ ನಂತರ ಶಾಲೆಯ ತೆರೆದ ಸಭಾಂಗಣವನ್ನು ಜಿಲ್ಲಾಡಳಿತ ಈ ಉದ್ದೇಶಕ್ಕೆ ಪಡೆದುಕೊಂಡಿತ್ತು. ಅಲ್ಲಿ ಮೃತದೇಹಗಳನ್ನು ಗುರುತಿಸಲು ಸುಲಭವಾಗಲಿದೆ ಎಂಬ ಕಾರಣಕ್ಕೆ ಹಾಗೆ ಮಾಡಲಾಗಿತ್ತು.

ಕೆಲವು ಹೆತ್ತವರು ತಮ್ಮ ಮಕ್ಕಳ ಭಯವನ್ನು ಕಂಡು ಅವರನ್ನು ಬೇರೆ ಶಾಲೆಗಳಿಗೆ ದಾಖಲಿಸುವ ಬಗ್ಗೆಯೂ ಚಿಂತಿಸುತ್ತಿದ್ದಾರೆ.

Similar News