ಭಾರತೀಯ ಕರಾವಳಿಯಿಂದ ದೂರ ಸಾಗುತ್ತಿರುವ ‘ಬಿಪರ್ಜಾಯ್’ ಚಂಡಮಾರುತ

Update: 2023-06-08 15:50 GMT

ಹೊಸದಿಲ್ಲಿ: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ‘ಬಿಪರ್ಜಾಯ್’ ಮುಂದಿನ ಮೂರು ದಿನಗಳಲ್ಲಿ ಪ್ರಬಲಗೊಳ್ಳಲಿದೆ. ಆದರೆ ಅದು ಉತ್ತರ-ವಾಯುವ್ಯ ದಿಕ್ಕಿನತ್ತ ಸಾಗುತ್ತಿದ್ದು ಭಾರತೀಯ ಕರಾವಳಿಯಿಂದ ದೂರವೇ ಉಳಿಯಲಿದೆ.

ಸಮುದ್ರದ ತಾಪಮಾನವನ್ನು ಬಳಸಿಕೊಂಡು ಚಂಡಮಾರುತವು ತನ್ನ ಶಕ್ತಿಯನ್ನು ವೇಗವಾಗಿ ವೃದ್ಧಿಸಿಕೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

‘‘ಭಾರತದ ಕರಾವಳಿ ಪ್ರದೇಶಗಳ ಮೇಲೆ ಅದು ಯಾವುದೇ ನೇರ ಪರಿಣಾಮವನ್ನು ಬೀರುವುದನ್ನು ನಾವು ನಿರೀಕ್ಷಿಸುತ್ತಿಲ್ಲ. ಇತ್ತೀಚಿನ ಮುನ್ನೆಚ್ಚರಿಕೆಯ ಪ್ರಕಾರ, ಚಂಡಮಾರುತವು ಉತ್ತರ-ವಾಯುವ್ಯ ದಿಕ್ಕಿನತ್ತ, ಅಂದರೆ ಭಾರತೀಯ ಕರಾವಳಿಯಿಂದ ದೂರಕ್ಕೆ ಸಾಗುತ್ತಿದೆ. ಅದು ಭಾರತೀಯ ಕರಾವಳಿಯತ್ತ ಬರುವ ಸೂಚನೆ ಸದ್ಯಕ್ಕಿಲ್ಲ’’ ಎಂದು ಪುಣೆಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಾ. ಕೆ.ಎಸ್. ಹೊಸಳೀಕರ್ ಹೇಳಿದ್ದಾರೆ.

‘‘ಆದರೆ, ಮೀನುಗಾರರಿಗೆ ನೀಡಲಾಗಿರುವ ಎಚ್ಚರಿಕೆ ಜಾರಿಯಲ್ಲಿರುತ್ತದೆ. ಸಮುದ್ರವು ಪ್ರಕ್ಷುಬ್ಧವಾಗಿರುವುದರಿಂದ ಪಶ್ಚಿಮ ಕರಾವಳಿಯುದ್ದಕ್ಕೂ ಜನರು ಎಚ್ಚರಿಕೆಯಿಂದ ಇರಬೇಕು’’ ಎಂದರು.

ಗುರುವಾರ ಮಧ್ಯಾಹ್ನದ ಹೊತ್ತಿಗೆ, ಚಂಡಮಾರುತವು ಪೂರ್ವ-ಮಧ್ಯ ಅರಬ್ಬಿ ಸಮುದ್ರದಲ್ಲೇ ಕೇಂದ್ರೀಕೃತವಾಗಿತ್ತು. ಅದು ‘ಅತ್ಯಂತ ಪ್ರಬಲ’ ಚಂಡಮಾರುತವಾಗಿ ರೂಪುಗೊಳ್ಳುತ್ತಿದೆ. ಗಂಟೆಗೆ 135-145 ಕಿ.ಮೀ. ವೇಗದ ಬಿರುಗಾಳಿ ಬೀಸುತ್ತಿದೆ. ಜೂನ್ 10ರ ವೇಳೆಗೆ ಅದು ಗಂಟೆಗೆ 170 ಕಿ.ಮೀ. ವೇಗವನ್ನು ಪಡೆದುಕೊಳ್ಳಬಹುದು. ಆದರೆ ಸಮುದ್ರದಲ್ಲಿ ಅತಿ ದೂರದಲ್ಲಿ ಇರುವುದರಿಂದ ಬಿರುಗಾಳಿಯ ಪ್ರಭಾವ ಕರಾವಳಿ ಪ್ರದೇಶಗಳ ಮೇಲೆ ಬೀಳುವುದಿಲ್ಲ. ಚಂಡಮಾರುತವು ಜೂನ್ 13ರವರೆಗೂ ‘‘ಪ್ರಬಲ’’ವಾಗಿಯೇ ಉಳಿಯಲಿದೆ.

ಗೋವಾದಿಂದ 850 ಕಿ.ಮೀ. ದೂರದಲ್ಲಿ

ಚಂಡಮಾರುತವು ಗುರುವಾರ ಮಧ್ಯಾಹ್ನದ ವೇಳೆಗೆ, ಗೋವಾದಿಂದ ಪಶ್ಚಿಮ-ನೈರುತ್ಯ ದಿಕ್ಕಿನಲ್ಲಿ ಸಮುದ್ರದಲ್ಲಿ 850 ಕಿ.ಮೀ. ದೂರದಲ್ಲಿ ಕೇಂದ್ರೀಕೃತಗೊಂಡಿದೆ ಎಂದು ಅದರ ಪಥದ ಮೇಲೆ ನಿಗಾ ಇಟ್ಟಿರುವ ವಿಜ್ಞಾನಿಗಳು ಹೇಳಿದ್ದಾರೆ. ಅದು ಮುಂಬೈಯಿಂದ ನೈರುತ್ಯಕ್ಕೆ 890 ಕಿ.ಮೀ. ಮತ್ತು ಪೋರಬಂದರ್ನಿಂದ ದಕ್ಷಿಣ-ನೈರುತ್ಯಕ್ಕೆ 900 ಕಿ.ಮೀ. ದೂರದಲ್ಲಿ ನೆಲೆಸಿದೆ.

ನಂತರದ ಕೆಲವು ಗಂಟೆಗಳಲ್ಲಿ ಅದು ಉತ್ತರ ದಿಕ್ಕಿನತ್ತ ಮುಂದುವರಿದಿದೆ. ಮುಂದಿನ 24 ಗಂಟೆಗಳಲ್ಲಿ ಅದು ನಿಧಾನವಾಗಿ ಬಲಗೊಳ್ಳುತ್ತದೆ ಮತ್ತು ಮುಂದಿನ ಮೂರು ದಿನಗಳಲ್ಲಿ ಉತ್ತರ-ವಾಯುವ್ಯ ದಿಕ್ಕಿನತ್ತ ಚಲಿಸುತ್ತದೆ ಎಂದು ಮುನ್ನೆಚ್ಚರಿಕೆ ತಿಳಿಸಿದೆ.

ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧ

ಚಂಡಮಾರುತವು ಪಶ್ಚಿಮ ಕರಾವಳಿಯಿಂದ ಹಲವು ನೂರು ಕಿಲೋಮೀಟರ್ ದೂರದಲ್ಲಿದ್ದರೂ, ಗೋವಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಎಚ್ಚರಿಕೆ ಘೋಷಿಸಲಾಗಿದೆ. ಪಶ್ಚಿಮ ಕರಾವಳಿಯ ಮೇಲೆ ಚಂಡಮಾರುತದ ನೇರ ಪರಿಣಾಮ ಇಲ್ಲದಿದ್ದರೂ, ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ. ಹಾಗಾಗಿ ಜೂನ್ 14ರ ಬಳಿಕ ಚಂಡಮಾರುತ ಶಾಂತಗೊಳ್ಳುವವರೆಗೂ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಾರದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈಗಾಗಲೇ ಸಮುದ್ರದಲ್ಲಿರುವವರು ಹಿಂದಿರುಗುವಂತೆ ಸಲಹೆ ನೀಡಲಾಗಿದೆ.

ಮುಂದಿನ 3-4 ದಿನಗಳಲ್ಲಿ ಮಹಾರಾಷ್ಟ್ರ-ಗುಜರಾತ್ ಕರಾವಳಿಯ ಮೇಲೆ ಗಂಟೆಗೆ 35-45 ಕಿ.ಮೀ. ವೇಗದ ಗಾಳಿ ಬೀಸಬಹುದು ಎಂದು ನಿರೀಕ್ಷಿಸಲಾಗಿದೆ.

Similar News