×
Ad

ಬ್ರಿಜ್ ಭೂಷಣ್ ವಿರುದ್ಧ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ರದ್ದುಪಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ದಿಲ್ಲಿ ಪೊಲೀಸ್

Update: 2023-06-15 12:43 IST

ಹೊಸದಿಲ್ಲಿ: ಕುಸ್ತಿ ಸಂಸ್ಥೆಯ ಮುಖ್ಯಸ್ಥ ಹಾಗೂ  ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಬಾಲಕಿಯ ಮೇಲಿನ ಅತ್ಯಾಚಾರ  ಪ್ರಕರಣವನ್ನು ರದ್ದುಪಡಿಸಿರುವ ದಿಲ್ಲಿ ಪೊಲೀಸರು ಗುರುವಾರ  500 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.

ಸಿಂಗ್ ವಿರುದ್ಧ ಬಾಲಕಿ ಸಲ್ಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ಪೊಲೀಸರು ಶಿಫಾರಸು ಮಾಡಿದ್ದಾರೆ. ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪಟಿಯಾಲ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

"POCSO ವಿಷಯದಲ್ಲಿ ತನಿಖೆ ಪೂರ್ಣಗೊಂಡ ನಂತರ, ನಾವು ದೂರುದಾರರ ಅಂದರೆ, ಸಂತ್ರಸ್ತೆಯ ತಂದೆ ಹಾಗೂ  ಸಂತ್ರಸ್ತೆಯ  ಹೇಳಿಕೆಗಳ ಆಧಾರದ ಮೇಲೆ ಪ್ರಕರಣವನ್ನು ರದ್ದುಗೊಳಿಸುವಂತೆ ವಿನಂತಿಸಿ 173 Cr PC ಅಡಿಯಲ್ಲಿ ಪೊಲೀಸ್ ವರದಿಯನ್ನು ಸಲ್ಲಿಸಿದ್ದೇವೆ’’ ಎಂದು ದಿಲ್ಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ತನಿಖೆ ಪೂರ್ಣಗೊಂಡ ನಂತರ ನಾವು ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 354, 354 ಎ, 354 ಡಿ ಅಡಿಯಲ್ಲಿ ಹಾಗೂ ಆರೋಪಿ ವಿನೋದ್ ತೋಮರ್ ವಿರುದ್ಧ ಐಪಿಸಿ ಸೆಕ್ಷನ್ 109/ 354/354 ಎ/506  ಅಡಿಯಲ್ಲಿ ಸಂಬಂಧಿತ ಗೌರವಾನ್ವಿತ ನ್ಯಾಯಾಲಯದ ಮುಂದೆ ಚಾರ್ಜ್‌ಶೀಟ್ ಸಲ್ಲಿಸುತ್ತಿದ್ದೇವೆ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಹಾಗೂ  ಸಾಕ್ಷಿ ಮಲಿಕ್ ಅವರನ್ನು ಕಳೆದ ವಾರ ಭೇಟಿಯಾಗಿ ಜೂನ್ 15 ರೊಳಗೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಭರವಸೆಯ ನಂತರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು.

ಸಿಂಗ್ ಒಳಗೊಂಡಿರುವ ಲೈಂಗಿಕ ಕಿರುಕುಳದ ಘಟನೆಗಳ ಬಗ್ಗೆ ದಿಲ್ಲಿ ಪೊಲೀಸರು ಐದು ದೇಶಗಳ ಕುಸ್ತಿ ಫೆಡರೇಶನ್‌ಗಳಿಂದ ಮಾಹಿತಿಯನ್ನು ಕೋರಿದ್ದಾರೆ. ತನಿಖಾ ತಂಡವು ಪಂದ್ಯಾವಳಿಗಳು ಹಾಗೂ ಕುಸ್ತಿಪಟುಗಳು ತಮ್ಮ ಪಂದ್ಯಗಳ ವೇಳೆ  ತಂಗಿದ್ದ ಸ್ಥಳಗಳಿಂದ ಫೋಟೋಗಳು, ವೀಡಿಯೊಗಳು ಹಾಗೂ  ಸಿಸಿಟಿವಿ ದೃಶ್ಯಗಳನ್ನು ಶೋಧಿಸುತ್ತಿದೆ.

ಆರೋಪಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) 180 ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿದೆ ಹಾಗೂ  ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ.

Similar News