×
Ad

ವಾರ್ತಾ ಇಲಾಖೆಯ ನಿಯಮ ಬದಲಾವಣೆಗೆ ದಿನೇಶ್ ಗೂಳಿಗೌಡ ಮನವಿ

ತಕ್ಷಣ ಚರ್ಚಿಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಸಿಎಂ ಸೂಚನೆ

Update: 2026-01-19 00:50 IST

ಬೆಂಗಳೂರು : ವಾರ್ತಾ ಇಲಾಖೆಯಲ್ಲಿ ಬದಲಾವಣೆ ತರುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ಸಲ್ಲಿಸಿದ ವರದಿ ಜಾರಿ ಮಾಡಬೇಕು ಎಂದು ಪರಿಷತ್ ಸದಸ್ಯ ದಿನೇಶ ಗೂಳಿಗೌಡ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದು, ಈ ಕುರಿತು ತಕ್ಷಣ ಚರ್ಚಿಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ರವಿವಾರ ಈ ಸಂಬಂಧ ಸಿಎಂಗೆ ಸಲ್ಲಿಸಿದ ಮನವಿ ಪತ್ರವನ್ನು ಬಿಡುಗಡೆ ಮಾಡಿದ ಗೂಳಿಗೌಡ, ವಾರ್ತಾ ಇಲಾಖೆ ಹೊಸ ವೃಂದ ಮತ್ತು ನೇಮಕಾತಿ ನಿಯಮ ಅಳವಡಿಸಿಕೊಳ್ಳುವ ಬದಲು ಹಳೆ ಪದ್ದತಿಯಲ್ಲೇ ಇದೆ. ಈಗಾಗಲೇ 15-20 ವರ್ಷದಿಂದ ಭಡ್ತಿ ಇಲ್ಲದ ಕಾರಣ ಸರಕಾರದ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಇಲಾಖೆಯು ಹೊಸದಾಗಿ ಅಳವಡಿಸಿಕೊಳ್ಳಲು ಉದ್ದೇಶಿಸಿರುವ ವೃಂದ-ನೇಮಕಾತಿ ನಿಯಮದ ಪ್ರಸ್ತಾವವನ್ನು ನೌಕರರಿಗೆ ನೀಡಿ, ತಕರಾರು, ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವೈಜ್ಞಾನಿಕ ನಿಯಮ ರೂಪಿಸಿ: ಎಲ್ಲ ವೃಂದದ ನೌಕರರಿಗೆ ಸೇವಾ ಅವಧಿಯಲ್ಲಿ ಕನಿಷ್ಠ 3 ಭಡ್ತಿಗಳಾದರೂ ಸಿಗುವಂತೆ ವೈಜ್ಞಾನಿಕವಾಗಿ ಹೊಸ ನೇಮಕಾತಿ ನಿಯಮಗಳನ್ನು ತಯಾರಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು. ಹಳೆಯ ನೇಮಕಾತಿ ನಿಯಮದಿಂದ ತೊಂದರೆಗೊಳಗಾದ ನೌಕರರು ಅನ್ಯಾಯಕ್ಕೆ ಒಳಗಾಗದಂತೆ ಎಚ್ಚರವಹಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಅವರು ಕೋರಿದ್ದಾರೆ.

ಜಾರಿಯಾಗದ ವರದಿ: ಈ ಹಿಂದೆ ನಮ್ಮದೇ ಸರಕಾರ ಈ ಸಂಬಂಧ ಅಧ್ಯಯನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ವಿವಿಧ ರಾಜ್ಯಗಳಿಗೆ ಹೋಗಿ ಭೇಟಿ ಕೊಟ್ಟು, ಅಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿ ವರದಿ ನೀಡಿದೆ. ಆದರೆ, ಸರಕಾರಕ್ಕೆ ವರದಿ ಸಲ್ಲಿಕೆಯಾಗಿ 8 ವರ್ಷ ಕಳೆದರೂ ವರದಿಯು ಅನುಷ್ಠಾ ನಗೊಂಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಇಲಾಖೆಯಲ್ಲಿ ಹಲವಾರು ಅಧಿಕಾರಿ-ಸಿಬ್ಬಂದಿ 15-20 ವರ್ಷಗಳು ಭಡ್ತಿ ಇಲ್ಲದೆ, ಒಂದೇ ವೃಂದ (ಕೇಡರ್)ದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದರಿಂದಾಗಿ ನೌಕರರಲ್ಲಿ, ನಿರುತ್ಸಾಹ ಉಂಟಾಗಿದೆ. ಸರಕಾರದ ಪ್ರಚಾರದ ಕೆಲಸಗಳು ಸಮರ್ಪಕವಾಗಿ, ವೇಗವಾಗಿ ಆಗಬೇಕು ಅನ್ನುವುದು ಜನಪ್ರತಿನಿಧಿಗಳ ಅಭಿಲಾಷೆ. ಇಲಾಖೆಯಲ್ಲಿ ವೃಂದ-ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಲಾಗುತ್ತಿದ್ದು, ಮನಸೋ ಇಚ್ಛೆ ಸಂಬಂಧವೇ ಇಲ್ಲದ ಒಂದು ವೃಂದದಿಂದ ಮತ್ತೊಂದು ವೃಂದಕ್ಕೆ ಭಡ್ತಿ ನೀಡಲು ಪ್ರಸ್ತಾಪಿಸಲಾಗಿದೆ ಎಂದು ದೂರಿದ್ದಾರೆ.

ಇಲಾಖೆಯ ಸಹಾಯಕ ನಿರ್ದೇಶಕ, ಹಿರಿಯ ಸಹಾಯಕ ನಿರ್ದೇಶಕ ಹಾಗೂ ಉಪ ನಿರ್ದೇಶಕ ಹುದ್ದೆಗಳು ಪತ್ರಿಕೋದ್ಯಮ ವಿಷಯದ ತಾಂತ್ರಿಕ ಹುದ್ದೆಗಳಾಗಿರುತ್ತವೆ. ಆದರೆ, ಲಿಪಿಕ ವರ್ಗದಲ್ಲಿ 3-4 ಭಡ್ತಿ ಪಡೆದುಕೊಂಡಿರುವ ಹಾಗೂ ಪತ್ರಿಕೋದ್ಯಮದ ಅನುಭವ ಇಲ್ಲದ ಆಡಳಿತಾಧಿಕಾರಿಯಾದವರನ್ನು ತಾಂತ್ರಿಕ ಹುದ್ದೆಯಾದ ಉಪನಿರ್ದೇಶಕ ಹುದ್ದೆಗೆ ಭಡ್ತಿ ಮೂಲಕ ನೇಮಕ ಮಾಡುವ ಅವೈಜ್ಞಾನಿಕ ಕ್ರಮವನ್ನು ಹೊಸ ವೃಂದ-ನೇಮಕಾತಿ ನಿಯಮದಲ್ಲಿ ಅಳವಡಿಸಿಕೊಳ್ಳಲಾಗುತ್ತಿದ್ದು ಇದು ಸರಿಯಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News