×
Ad

ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ವಿರೋಧಿಸಿ ಜ.20ಕ್ಕೆ ‘ದಕ್ಷಿಣ ಭಾರತ ಸಮಾಜವಾದಿ ಸಮಾವೇಶ’

Update: 2026-01-19 01:00 IST

ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆ ಮೇಲೆ ಮಾಡುತ್ತಿರುವ ದಾಳಿಯನ್ನು ವಿರೋಧಿಸಿ ಸಮಾಜವಾದಿ ಸಮಾಗಮ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ವತಿಯಿಂದ ಜ.20ಕ್ಕೆ ನಗರದ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ‘ದಕ್ಷಿಣ ಭಾರತ ಸಮಾಜವಾದಿ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ.

ರವಿವಾರ ಈ ಕುರಿತು ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕಂಠಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ದಯಾನಂದ, ನಾಗೇಶ್ ಅರಳಕುಪ್ಪೆ, ಕೆ.ಆರ್.ಸುಭಾಷ್‌, ಮಾವಳ್ಳಿ ಅರವಿಂದ್, ಕೆ.ಎಸ್. ನಾಗರಾಜ್, ಅಖಿಲಾ ವಿದ್ಯಾಸಂದ್ರ, ವೇಣು, ರಘುಕುಮಾರ್ ಹಾಗೂ ಅಲಿಬಾಬಾ ಜಂಟಿ ಪತ್ರಿಕಾ ಪ್ರಕಟನೆ ನೀಡಿದ್ದಾರೆ.

ಇತ್ತಿಚಿನ ದಿನಗಳಲ್ಲಿ ನಮ್ಮನ್ನಾಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನಸಂಖ್ಯಾ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಮರುವಿಗಡಣೆ ಮಾಡುವ ವಿಚಾರ ಹರಿಬಿಟ್ಟಿದೆ. ಅದೇನಾದರೂ ಕಾರ್ಯಗತವಾದರೆ ಒಕ್ಕೂಟ ವ್ಯವಸ್ಥೆಯಲ್ಲಿರುವ ದಕ್ಷಿಣದ ರಾಜ್ಯಗಳಿಗೆ ಭಾರಿ ಪ್ರಮಾಣದ ಹೊಡೆತ ಬೀಳಲಿದೆ. ದೇಶ ಅರಾಜಕತೆಕಡೆಗೆ ತಳ್ಳಲ್ಪಡುತ್ತದೆ. ಅಷ್ಟೇ ಅಲ್ಲದೇ ಕೇಂದ್ರ ಸರಕಾರ ದಕ್ಷಿಣ ರಾಜ್ಯಗಳಿಗೆ ಕೊಡಬೇಕಾದ ತೆರಿಗೆಯ ಪಾಲನ್ನು ಕೊಡದೆ, ತಾರತಮ್ಯ ಧೋರಣೆ ಮಾಡುತ್ತಿದೆ. ಇಂತಹ ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲುವ ಹಾಗೂ ಮಂಥನದ ತುರ್ತು ಕೆಲಸವಾಗಬೇಕಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದು, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಆಶಯ ನುಡಿಗಳಾಡಲಿದ್ದಾರೆ. ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ಸುದರ್ಶನ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಚಿತ್ರಕಲಾ ಪರಿಷತ್‍ನ ಅಧ್ಯಕ್ಷ ಬಿ.ಎಲ್.ಶಂಕರ್, ಸಾಹಿತಿಗಳಾದ ಡಾ.ಎಲ್.ಹನುಮಂತಯ್ಯ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾರೆಡ್ಡಿ, ಥಂಪನ್ಥಾಮಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತಮಿಳುನಾಡಿನ ಶಾಸಕ ರಾಜೇಶ್ ಕುಮಾರ್, ಕೇರಳದ ಮಾಜಿ ಸಚಿವ ಪ್ರೊ.ಐಸ್ಯಾಕ್ ಥಾಮಸ್, ತೆಲಂಗಾಣದ ಶಾಸಕ ಡಾ.ವಂಶಿಕೃಷ್ಣ, ನೆರರಾಜ್ಯಗಳ ಮಾಜಿ ಶಾಸಕರಾದ ವಿಜಯರಾಘವನ್, ಯಾದವರೆಡ್ಡಿ, ಹಿರಿಯ ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯೂ, ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಹೋರಾಟಗಾರರಾದ ಪ್ರೊ.ಪ್ರಕಾಶ್ ಕಮ್ಮರಡಿ, ಕೆ.ವಿ.ಭಟ್, ನೂರ್ ಶ್ರೀಧರ್, ಮಂಗ್ಳೂರ ವಿಜಯ ಸೇರಿದಂತೆ ಹಲವು ಸಾಹಿತಿಗಳು, ಚಿಂತಕರು ವಿವಿಧ ಗೋಷ್ಠಿಗಳಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News