ಮೇ 17ರಂದು ಭೀಮಗಡ ವನ್ಯಜೀವಿ ವಲಯದ ಕುಟುಂಬಗಳಿಗೆ ಚೆಕ್ ವಿತರಣೆ : ಈಶ್ವರ್ ಖಂಡ್ರೆ
ಬೆಂಗಳೂರು : ಕಾಡುಪ್ರಾಣಿಗಳ ದಾಳಿಯ ಭೀತಿಯೊಂದಿಗೆ ನಿತ್ಯ ಬದುಕು ಸಾಗಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಭೀಮಗಢ ವನ್ಯಜೀವಿ ಧಾಮದ ಒಳಗೆ ಇದ್ದ ತಾಳೇವಾಡಿಯ ಗವಾಳಿ ಗ್ರಾಮದ 27 ಕುಟುಂಬಗಳು ಸ್ವ ಇಚ್ಛೆಯಿಂದ ಸ್ಥಳಾಂತರಕ್ಕೆ ಸಮ್ಮತಿಸಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ವಯಂ ಪ್ರೇರಿತರಾಗಿ ಅರಣ್ಯದೊಳಗಿನಿಂದ ಸಮಾಜದ ಮುಖ್ಯವಾಹಿನಿ ಸೇರಲು ಬಯಸಿ ಬಂದಿರುವ 27 ಕುಟುಂಬ ಘಟಕಗಳಿಗೆ ಮೇ 17ರಂದು ಮೊದಲ ಹಂತದಲ್ಲಿ ತಾವೇ ತಲಾ 10ಲಕ್ಷ ರೂ.ಚೆಕ್ ವಿತರಿಸುವುದಾಗಿ ತಿಳಿಸಿದ್ದಾರೆ.
ಈ ಕುಟುಂಬ ಘಟಕಗಳು ಕಾಡಿನೊಳಗಿರುವ ಮನೆಗಳನ್ನು ತೊರೆದು ಸ್ಥಳಾಂತರಗೊಂಡ ಬಳಿಕ, ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ ತರುವಾಯ ಪ್ರತಿ ಕುಟುಂಬದ ಘಟಕಕ್ಕೆ ಉಳಿದ 5 ಲಕ್ಷ ರೂ. ಚೆಕ್ ವಿತರಿಸಲಾಗುವುದು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ, ತಾವು ಖುದ್ದು ಈ ಪ್ರದೇಶಕ್ಕೆ ಭೇಟಿ ನೀಡಿ ಅರಣ್ಯವಾಸಿಗಳೊಂದಿಗೆ ಸಂವಾದ ನಡೆಸಿದಾಗ ಅವರೆಲ್ಲರೂ ಸ್ವಯಂ ಪ್ರೇರಿತವಾಗಿ ಕಾಡಿನಿಂದ ಹೊರಬರುವ ಇಂಗಿತ ವ್ಯಕ್ತಪಡಿಸಿದ್ದರು. ಆ ನಂತರ ಅವರ ಸ್ಥಳಾಂತರಕ್ಕೆ ಅವಶ್ಯಕವಾದ ಗ್ರಾಮಸಭೆ ಇತ್ಯಾದಿ ಪ್ರಕ್ರಿಯೆಯನ್ನು ಅರಣ್ಯ ಅಧಿಕಾರಿಗಳು ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎಲ್ಲರೂ ಆಧುನಿಕ ಜಗತ್ತಿನಲ್ಲಿ ಜೀವಿಸುತ್ತಿರುವಾಗ ಈ ಅರಣ್ಯವಾಸಿಗಳು ರಸ್ತೆ, ನೀರು, ವಿದ್ಯುತ್ ಈ ಎಲ್ಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅನಾರೋಗ್ಯದ ಸಂದರ್ಭದಲ್ಲಿ ರಾತ್ರಿಯ ವೇಳೆ ಕಾಡಿನಿಂದ ಊರಿಗೆ ರೋಗಿಗಳನ್ನು ಕರೆದುಕೊಂಡು ಹೋಗುವುದು ಕಷ್ಟ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಮುಂದೆ ಬಂದ ತಾಳೇವಾಡಿಯ ಗೌವಳಿ ಗ್ರಾಮದ ಸ್ಥಳಾಂತರ ಮೊದಲ ಹಂತದಲ್ಲಿ ನಡೆಯುತ್ತಿದ್ದು, ಉಳಿದ ಇನ್ನೂ ಕೆಲವು ಗ್ರಾಮಗಳ ಸ್ಥಳಾಂತರಕ್ಕೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.