×
Ad

ಮಹಿಳಾ ಸಬಲೀಕರಣ ವಿಚಾರದಲ್ಲಿ ನಾವು ಭದ್ರ ಅಡಿಪಾಯ ಹಾಕಿದ್ದೇವೆ : ಡಿ.ಕೆ.ಶಿವಕುಮಾರ್

ಸರಕಾರಿ ಮಹಿಳಾ ನೌಕರರ ಸಮ್ಮೇಳನ ಕಾರ್ಯಕ್ರಮ

Update: 2025-12-04 15:27 IST

ಬೆಂಗಳೂರು : “ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ ಮಹಿಳಾ ನೌಕರರು ಜಾತಿ ಸಂಘಗಳ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರ ಮೇಲೆ ಸಂಘಟನೆ ಮಾಡಿ. ನಿಮ್ಮದು ಕೇವಲ ಒಂದೇ ಒಂದು ಸಂಘ ಇರಬೇಕು. ಅದು ಮಹಿಳಾ ಸಂಘವಾಗಿರಬೇಕು. ಇದು ನಾನು ನಿಮಗೆ ನೀಡುತ್ತಿರುವ ಸಲಹೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಸರಕಾರಿ ಮಹಿಳಾ ನೌಕರರ ಸಮ್ಮೇಳನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ನಾನು ಬಂಗಾರಪ್ಪನವರ ಸರಕಾರದಲ್ಲಿ ಸಚಿವನಾಗಿದ್ದಾಗಿನಿಂದ. ಅಂದರೆ 40 ವರ್ಷಗಳಿಂದ ಈ ಸಂಘವನ್ನು ಗಮನಿಸಿಕೊಂಡು ಬಂದಿದ್ದೇನೆ. ನಿಮ್ಮ ಒಗ್ಗಟ್ಟು ಬಿಡಬೇಡಿ. ಲಿಂಗಾಯತರ, ಹಿಂದುಳಿದ ವರ್ಗಗಳ, ಒಕ್ಕಲಿಗರ, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸಂಘ ಎಂದು ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ. ಈ ಆಲೋಚನೆಯನ್ನು ನಿಮ್ಮ ತಲೆಯಿಂದ ತೆಗೆದುಹಾಕಿ” ಎಂದು ಕಿವಿಮಾತು ಹೇಳಿದರು.

“ಸಂಘಟನೆ ಬಹಳ ಮುಖ್ಯ. ಶಿಕ್ಷಣ ಇಲಾಖೆಯಲ್ಲಿ 50%ಗೂ ಹೆಚ್ಚು ಜನ ಇದ್ದೀರಿ. ಮಹಿಳೆಯರು ಕರುಣೆಯ ಕಡಲು, ಮಮತೆಯ ಮುಗಿಲು. ನಾನಾಗಲಿ, ಸಿದ್ದರಾಮಯ್ಯ ಅವರಾಗಲಿ, ಯಾವುದೇ ವ್ಯಕ್ತಿಯಾಗಲಿ ಮಹಿಳೆಯರ ಕೊಡುಗೆ ಇಲ್ಲದೆ ಯಾವುದೇ ಪುರುಷ ಯಶಸ್ವಿಯಾಗಲಾರ. ನಾವೆಲ್ಲರೂ ರಾಜಕಾರಣ ಮಾಡಿಕೊಂಡು ಮನೆಗೆ ಸಮಯ ನೀಡುವುದಿಲ್ಲ. ನಮ್ಮ ಮನೆ ನಡೆಸಿ ನಿಭಾಯಿಸುತ್ತಿರುವವರು ಮಹಿಳೆಯರು. ನನಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನನಗಿಂತ ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತಾರೆ. ಅವರು ಈಗ ಮಾಡಿರುವ ಸಾಧನೆ ನಾನು ಆ ವಯಸ್ಸಿನಲ್ಲಿ ಮಾಡಿರಲಿಲ್ಲ” ಎಂದು ಬಣ್ಣಿಸಿದರು.

“ಮಹಿಳೆಯರು ಪುರುಷರಿಗಿಂತ ಹೆಚ್ಚು ಸಮರ್ಥರಿದ್ದೀರಿ. ಡಿಜಿಯಾಗಿ, ಸರಕಾರ ಮುಖ್ಯ ಕಾರ್ಯದರ್ಶಿಯಾಗಿ ಆಡಳಿತದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ನೀವು ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದ್ದೀರಿ. ನೀವುಗಳು ದೂರಿನ ಪೆಟ್ಟಿಗೆಯಂತೆ ಆಗಬಾರದು. ನಿಮ್ಮ ಹಕ್ಕನ್ನು ಚಲಾಯಿಸಬೇಕು. ಹೆಣ್ಣು ಕುಟುಂಬದ ಕಣ್ಣು ಎಂದು ನಾವು ನಂಬಿದ್ದೇವೆ. ನಾವು ಎಲ್ಲೇ ಹೋದರು, ಗ್ರಾಮ ದೇವತೆ ಯಾವುದು ಎಂದು ಕೇಳುತ್ತೇವೆ. ಬೆಂಗಳೂರಿನ ಗ್ರಾಮ ದೇವತೆ ಅಣ್ಣಮ್ಮ. ಭೂಮಿಯನ್ನು ಭೂತಾಯಿ ಎಂದು ಕರೆಯುತ್ತೇವೆ. ನಾಡ ದೇವತೆ ಚಾಮುಂಡೇಶ್ವರಿ ಎಂದು ಪರಿಗಣಿಸಿದ್ದೇವೆ. ಹೀಗೆ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ” ಎಂದು ತಿಳಿಸಿದರು.

"ನೀವು ನಾಯಕತ್ವ ಗುಣ ಬೆಳೆಸಿಕೊಂಡು ನಾಯಕಿಯರಾಗಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಪಂಚಾಯ್ತಿಯಲ್ಲಿ ನಾವು 50% ಮೀಸಲಾತಿ ನೀಡಿದ್ದು, ಸಂಸತ್ ಚುನಾವಣೆಯಲ್ಲಿ 33% ಜಾರಿಯಾಗುವ ಹಂತದಲ್ಲಿದೆ. ಇದರಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 70 ಕ್ಷೇತ್ರಗಳಲ್ಲಿ ಮಹಿಳಾ ಶಾಸಕಿಯರು ಆಯ್ಕೆಯಾಗಲಿದ್ದಾರೆ. ನಾಯಕತ್ವ ಗುಣ ಇರುವ ಸರಕಾರಿ ಮಹಿಳಾ ನೌಕರರಿಗೆ ನಾವು ಟಿಕೆಟ್ ನೀಡಿ ಗೆಲ್ಲಿಸಿದ್ದೇವೆ. ಹಲವರು ಶಾಸಕಿಯರಾಗಿದ್ದಾರೆ. ಮೀಸಲಾತಿ ಬಂದ ನಂತರ ಯಾರು ನಾಯಕಿಯರಾಗುತ್ತೀರೋ ಗೊತ್ತಿಲ್ಲ” ಎಂದು ಹೇಳಿದರು.

ನಿಮ್ಮ ಬೇಡಿಕೆಯಂತೆ ಸಂಘಕ್ಕೆ ಅಗತ್ಯವಾದ ಭೂಮಿ ನೀಡಲಾಗುವುದು :

“ಮಹಿಳಾ ನೌಕಕರ ಸಂಘಕ್ಕೆ ಜಾಗದ ಮನವಿ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಎಂ ಹಾಗೂ ನನ್ನ ಬಳಿ ಪ್ರಸ್ತಾಪ ಮಾಡಿದರು. ಸಿಎಂ ಅವರು ಜಾಗ ನೀಡಿ ಎಂದು ಮುಕ್ತವಾಗಿ ಹೇಳಿದ್ದಾರೆ. ನಿಮಗೆ ಅಗತ್ಯವಾಗಿರುವ ಜಾಗವನ್ನು ನೀಡುತ್ತೇವೆ. ಹೆಣ್ಣು ಮಗು ಕಲಿತರೆ ಒಂದು ಕುಟುಂಬ ಹಾಗೂ ಸಮಾಜವೇ ಕಲಿತಂತೆ ಎಂದು ನೆಹರೂ ಅವರು ನಮಗೆ ಸಂದೇಶ ನೀಡಿದ್ದಾರೆ. ಮಹಿಳೆಯರು ಸಹಕಾರ ನೀಡದಿದ್ದರೆ ನಮಗೆ ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ” ಎಂದು ತಿಳಿಸಿದರು.

ಮಹಿಳಾ ಸಬಲೀಕರಣ ವಿಚಾರದಲ್ಲಿ ನಾವು ಭದ್ರ ಅಡಿಪಾಯ ಹಾಕಿದ್ದೇವೆ :

“ನಾನು ಹಾಗೂ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೊದಲು ಜಾರಿಗೆ ತಂದಿದ್ದೆ, ಮಹಿಳೆಯರಿಗಾಗಿ ಘೋಷಣೆಯಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆಗಳನ್ನು ಸರಕಾರಿ ನೌಕರರಾದರೂ ನಿಮಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆಯಲ್ಲವೇ? ಸರಕಾರಿ ಮಹಿಳಾ ನೌಕರರು ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ ಮಾಡಬಹುದಲ್ಲವೇ? ಬಡ ಮಹಿಳೆಯರಿಗೆ 2 ಸಾವಿರ ನೀಡುತ್ತಿದ್ದೇವೆ ಅಲ್ಲವೇ? ನಮ್ಮ ಯೋಜನೆ ನೋಡಿ ಇಡೀ ದೇಶದಲ್ಲಿ ಈ ಯೋಜನೆ ಜಾರಿ ಮಾಡುತ್ತಿದ್ದಾರಲ್ಲವೇ? ಹೀಗಾಗಿ ಮಹಿಳಾ ಸಬಲೀಕರಣ ವಿಚಾರದಲ್ಲಿ ನಾವು ಭದ್ರ ಅಡಿಪಾಯ ಹಾಕಿದ್ದೇವೆ. ಮಹಿಳೆಯರ ಪರವಾಗಿ ಚಿಂತನೆ ಮಾಡಿರುವ ಸರಕಾರ ಇದ್ದರೆ ಅದು ನಮ್ಮ ಸರ್ಕಾರ ಮಾತ್ರ. ಮಹಿಳೆಯರು ಉಪಕಾರ ಸ್ಮರಣೆ ಇಟ್ಟುಕೊಂಡಿರುತ್ತಾರೆ. ತಾಯಿ ಹೃದಯದವರು, ಸಹಾಯ ಮಾಡಿದವರನ್ನು ಸ್ಮರಿಸುತ್ತೀರಿ ಎಂದು ನಾವು ಮಹಿಳೆಯರಿಗಾಗಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News