×
Ad

ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವರ‌ ಪ್ರತಿಕ್ರಿಯೆ

Update: 2025-11-04 15:10 IST

ಬೆಂಗಳೂರು: ನಾವು ಕೂಡ ರೈತರು, ಕಾರ್ಖಾನೆ ಇದ್ದ ಕಾರಣಕ್ಕೆ ರೈತರ ಕಷ್ಟ ಗೊತ್ತಿಲ್ಲ ಎಂದಲ್ಲ. ರೈತರಿಗೂ ಅನ್ಯಾಯ ಆಗಬಾರದು, ಕಾರ್ಖಾನೆ ಮಾಲಕರಿಗೂ ಅನ್ಯಾಯ ಆಗಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಕಬ್ಬು ಬೆಲೆ ಹೆಚ್ಚಳಕ್ಕೆ ರೈತರ ಪ್ರತಿಭಟನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,‌ ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ನಾನು ಬ್ಯೂಸಿ ಇದ್ದ ಕಾರಣ ಮೀಟಿಂಗ್ ನಲ್ಲಿ ಇರಲಿಲ್ಲ. ನನ್ನ ತಮ್ಮ ಹಾಗೂ ಮಗ ರೈತರ ಸಂಪರ್ಕದಲ್ಲಿದ್ದಾರೆ ಎಂದರು.

ಕಾರ್ಖಾನೆ ಮಾಲಕರು, ರೈತರು ಸೇರಿ ಸಭೆ ಮಾಡುತ್ತೇವೆ. ದರದ ಬಗ್ಗೆ ಮಾತನಾಡಲು ಹೋದರೆ ಬೇರೆ ರೀತಿ ಆಗುತ್ತೆ. ರೈತರಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದರು.

ರೈತರ ಪ್ರತಿಭಟನೆಯಲ್ಲಿ ‌ಬಿಜೆಪಿ ನಾಯಕರು ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ರೈತರ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಲಿ, ರಾಜಕೀಯ ಬಿಟ್ಟು ಪ್ರತಿಭಟನೆಗೆ ಹೋಗಲಿ. ರೈತರ ಬಗೆಗಿನ ಬಿಜೆಪಿ ಹೋರಾಟ ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ ಎಂದರು.

ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ಹೇಗೆಲ್ಲಾ ಹತ್ತಿಕ್ಕಿತು. ಈ ಹೋರಾಟದಲ್ಲಿ ಎಷ್ಟು ಜನ ರೈತರು ತೀರಿಕೊಂಡರು ಎನ್ನುವುದು ಗೊತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ರೈತರ ಬಗ್ಗೆ ಕಾಳಜಿ ಇರಲಿ.‌ ಸದ್ಯಕ್ಕೆ ನಾನು ಈ ಬಗ್ಗೆ ಏನೂ ಮಾತನಾಡಲ್ಲ ಎಂದು‌ ಸಚಿವರು ಪ್ರತಿಕ್ರಿಯಿಸಿದರು.

ನ.19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಹುಲ್ ಗಾಂಧಿ ಅವರ ಬಳಿ‌ ನ.19 ಮತ್ತು 20ಕ್ಕೆ ಸಮಯ ಕೊಡಿ ಎಂದು ಕೇಳಿದ್ದೇವೆ. ಬೆಂಗಳೂರಿನಲ್ಲಿ ಟೆಕ್‌ ಶೃಂಗ ಸಭೆ ನಡೆಯಲಿದ್ದು, ಸಮಯ ಹೊಂದಿಸಿಕೊಂಡು ಹೇಳುವುದಾಗಿ ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಅಂಗನವಾಡಿಗಳನ್ನು ಪ್ರಥಮ ಬಾರಿಗೆ ಮೈಸೂರಲ್ಲಿ ಆರಂಭ ಮಾಡಿದ್ದು ಇಂದಿರಾ ಗಾಂಧಿ, ಎಲ್ಲಾ ಬಡ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಕೊಡಬೇಕು ಎಂದು ಆರಂಭಿಸಲಾಯಿತು. ಇದೀಗ ಐವತ್ತು ವರ್ಷ ಪೂರೈಸಿದ್ದು, ಇಂತಹ ಒಂದು ಸುವರ್ಣ ಸಂಭ್ರಮವನ್ನು ಕಂಠೀರವ ಕ್ರೀಡಾಂಗಣದಲ್ಲಿ ಮಾಡಲಾಗುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News