ಪೋಪ್ ಫ್ರಾನ್ಸಿಸ್ ನಿಧನಕ್ಕೆ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಸಂತಾಪ
ಪೋಪ್ ಫ್ರಾನ್ಸಿಸ್ (Photo: PTI)
ಬೆಂಗಳೂರು: ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಬೆಂಗಳೂರಿನ ಆರ್ಚ್ ಡಯಾಸಿಸ್ ಸಂತಾಪವನ್ನು ಸೂಚಿಸಿದೆ.
ಈ ಸಂಬಂಧ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಅವರು ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದ್ದಾರೆ. ಪೋಪ್ ಫ್ರಾನ್ಸಿಸ್‌ರವರ ನಿಧನದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಜಗತ್ತು ಕೇವಲ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಅವರನ್ನು ಕಳೆದುಕೊಂಡಿಲ್ಲ, ಓರ್ವ ತಂದೆ, ಬಡವರ ಸಹೋದರನನ್ನು ಕಳೆದುಕೊಂಡಿದೆ.
ಸರಳ ವ್ಯಕ್ತಿಯಾಗಿರುವ ಪೋಪ್ ಫ್ರಾನ್ಸಿಸ್ ಅವರು ಬೋಧಿಸಿದಂತೆಯೇ ಜೀವಿಸುತ್ತಿದ್ದರು. ಅವರು ಧ್ವನಿಯಿಲ್ಲದವರಿಗೆ ಧ್ವನಿಯಾಗಿದ್ದರು. ಪೋಪ್ ಫ್ರಾನ್ಸಿಸ್ ವಲಸಿಗರು, ನಿರಾಶ್ರಿತರ ಶ್ರೇಯಸ್ಸಿಗೆ ಧಣಿವರಿಯದೆ ತೊಡಗಿಸಿಕೊಂಡರು. ವಲಸಿಗ ಸಹೋದರ ಅಥವಾ ಸಹೋದರಿಯನ್ನು ಅಪ್ಪಿಕೊಳ್ಳಬೇಕೆಂದು ಜಗತ್ತಿಗೆ ಹೇಳುವಲ್ಲಿ ಧೈರ್ಯ ತೋರಿದರು.
ಅವರು ಕರುಣೆ ಮತ್ತು ಆಶ್ವಾಸನೆಯ ಸಾಕಾರ ಮೂರ್ತಿಯಾಗಿದ್ದರು. ಇಂದು ನಮ್ಮ ಹೃದಯಗಳು ಆಳವಾದ ದುಃಖದಿಂದಿದೆ. ಅವರ ಸೌಮ್ಯತೆ, ಸಲಹೆ ಮತ್ತು ಅವರ ಪ್ರಕಾಶಮಾನವಾದ ನಗು ಲಕ್ಷಾಂತರ ಜನರ ಹೃದಯದಲ್ಲಿ ಉಳಿಯಲಿದೆ.
ನಮ್ಮ ಪ್ರೀತಿಯ ಪವಿತ್ರ ತಂದೆಯು ಈಗ ಅವರು ನಿಷ್ಠೆಯಿಂದ ಸೇವೆ ಸಲ್ಲಿಸಿದ ದೇವರ ಶಾಶ್ವತ ಆಲಿಂಗನದಲ್ಲಿ ವಿಶ್ರಾಂತಿ ಪಡೆಯಲಿ. ನಮ್ರತೆಯಿಂದ ನಡೆದುಕೊಳ್ಳುವ ಮೂಲಕ, ಪ್ರೀತಿಸುವ ಮತ್ತು ನ್ಯಾಯಯುತವಾಗಿ ವರ್ತಿಸುವ ಮೂಲಕ ನಾವು ಅವರ ಪರಂಪರೆಯನ್ನು ಗೌರವಿಸುವುದನ್ನು ಮುಂದುವರಿಸೋಣ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.