×
Ad

ಬೆಂಗಳೂರು | ಮಹಿಳೆಯರ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್ ಮಾಡುತ್ತಿದ್ದ ಆರೋಪಿ ಬಂಧನ

Update: 2025-05-11 19:06 IST

ಬಂಧಿತ ಆರೋಪಿ

ಬೆಂಗಳೂರು : ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು ಸಂಗ್ರಹಿಸಿ ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡುತ್ತಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಆಶಿಶ್ ಮೊನ್ನಪ್ಪ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಮಡಿಕೇರಿ ಮೂಲದ ಈತ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಜಕ್ಕೂರಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದೂರು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2023ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಆರೋಪಿ, 2024ರ ಜನವರಿಯಲ್ಲಿ ಕೆಲಸ ತೊರೆದಿದ್ದ. ಬೇರೆ ಕಂಪೆನಿಗಳಿಗೆ ರೆಸ್ಯೂಮ್ ಕಳುಹಿಸಲು ಹಳೆ ಕಂಪೆನಿಯ ಮಹಿಳಾ ಸಹೋದ್ಯೋಗಿಯಿಂದ ಲ್ಯಾಪ್‍ಟಾಪ್ ಪಡೆದುಕೊಂಡಿದ್ದ. ಕೆಲ ದಿನಗಳ ನಂತರ ಆರೋಪಿಯು ಸ್ನೇಹಿತೆಗೆ ಲ್ಯಾಪ್‍ಟಾಪ್ ವಾಪಸ್ ನೀಡಿದ್ದ. ಲ್ಯಾಪ್‍ಟಾಪ್ ನೀಡುವಾಗ ಅಸಭ್ಯವಾಗಿ ಮಹಿಳೆಯರ ಫೋಟೋಗಳನ್ನು ಎಡಿಟ್ ಮಾಡಿಟ್ಟುಕೊಂಡಿದ್ದ ಫೋಲ್ಡರ್ ಡಿಲೀಟ್ ಮಾಡುವುದನ್ನು ಮರೆತಿದ್ದ. ಸ್ನೇಹಿತೆಯು ಲ್ಯಾಪ್‍ಟಾಪ್ ನೋಡಿದಾಗ ಕಂಪೆನಿಯ ಸಹೋದ್ಯೋಗಿಗಳ ಅಶ್ಲೀಲ ಮಾರ್ಫ್ ಚಿತ್ರಗಳನ್ನು ಕಂಡು ಭಯಭೀತರಾಗಿದ್ದರು. ಈ ಬಗ್ಗೆ ಕರೆ ಮಾಡಿ ಕರೆಸಿಕೊಂಡು ಪ್ರಶ್ನಿಸಿದಾಗ, ಆರೋಪಿ ಆತಂಕಗೊಂಡು ಸ್ಥಳದಲ್ಲೇ ಮೊಬೈಲ್ ಬಿಟ್ಟು ಪರಾರಿಯಾಗಿದ್ದ. ಈ ಸಂಬಂಧ ಮಹಿಳೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News