×
Ad

ಬೆಂಗಳೂರು | ಸಿಗರೇಟ್ ವಿಚಾರಕ್ಕೆ ಗಲಾಟೆ ನಡೆದು ಸಾಫ್ಟ್‌ವೇರ್ ಉದ್ಯೋಗಿಯ ಹತ್ಯೆ: ಆರೋಪಿ ಬಂಧನ

Update: 2025-05-17 19:13 IST

ಆರೋಪಿ ಪ್ರತೀಕ್

ಬೆಂಗಳೂರು : ಸಿಗರೇಟ್ ವಿಚಾರಕ್ಕೆ ಗಲಾಟೆ ನಡೆದು ಕಾರು ಗುದ್ದಿಸಿ ಸಾಫ್ಟ್‌ವೇರ್ ಉದ್ಯೋಗಿಯನ್ನು ಹತ್ಯೆಗೈದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಸಂಜಯ್ ಎಂಬುವರನ್ನು ಕೊಲೆಗೈದ ಆರೋಪದಡಿ ಪ್ರತೀಕ್ ಎಂಬಾತನನ್ನು ಬಂಧಿಸಲಾಗಿದೆ. ಮೇ10ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಗಳೂರಿನ ಕನಕಪುರ ರಸ್ತೆಯ ವಸಂತಪುರ ಕ್ರಾಸ್‍ನಲ್ಲಿ ಘಟನೆ ನಡೆದಿದೆ.

ಸಾಫ್ಟ್‌ ವೇರ್ ಉದ್ಯೋಗಿಗಳಾದ ಸಂಜಯ್ ಹಾಗೂ ಕಾರ್ತಿಕ್ ಎಂಬುವರು ರಾತ್ರಿ ಪಾಳಿಯಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು. ಮೇ 10ರಂದು ಬೆಳಗಿನ ಜಾವ ತಮ್ಮ ಮನೆಯಿಂದ ಟೀ ಕುಡಿಯಲು ಹೊರಬಂದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಈ ವೇಳೆ ಅದೇ ರಸ್ತೆಯಲ್ಲಿ ಪತ್ನಿಯೊಂದಿಗೆ ಕಾರಿನಲ್ಲಿ ಬಂದ ಪ್ರತೀಕ್, ಕಾರಿನಿಂದಿಳಿಯದೆ ಸಿಗರೇಟ್ ತಂದುಕೊಡುವಂತೆ ಸಂಜಯ್‍ಗೆ ಹೇಳಿದ್ದ. ಇದರಿಂದ ಕೋಪಗೊಂಡ ಸಂಜಯ್ ಮತ್ತು ಕಾರ್ತಿಕ್, ಪ್ರತೀಕ್‍ನೊಂದಿಗೆ ವಾಗ್ವಾದ ಮಾಡಿದ್ದರು. ಗಲಾಟೆ ಜೋರಾದಾಗ ಕಾರಿನಲ್ಲಿದ್ದ ಪ್ರತೀಕ್ ಪತ್ನಿ, ಹಾಗೂ ಅಂಗಡಿಯವರು ಜಗಳ ಬಿಡಿಸಿ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಸಂಜಯ್ ಹಾಗೂ ಕಾರ್ತಿಕ್ ದ್ವಿಚಕ್ರ ವಾಹನದಲ್ಲಿ ಮುಂದೆ ಹೋಗುವಾಗ ಪ್ರತೀಕ್ ವೇಗವಾಗಿ ಬಂದು ಕಾರು ಗುದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜಯ್ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್, ಆರಂಭದಲ್ಲಿ ಇದನ್ನು ಅಪಘಾತ ಪ್ರಕರಣವೆಂದು ತಿಳಿಯಲಾಗಿತ್ತು. ಆದರೆ, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬಯಲಿಗೆ ಬಂದಿದೆ. ಸದ್ಯ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಮೊದಲು ದಾಖಲಾಗಿದ್ದ ಕೊಲೆ ಯತ್ನವನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ. ಕಾರು ಚಾಲಕನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News