ಬೆಂಗಳೂರು ಕಾಲ್ತುಳಿತ ಪ್ರಕರಣ: 14 ಮಂದಿ ಗಾಯಾಳುಗಳ ಹೇಳಿಕೆ ದಾಖಲಿಸಿಕೊಂಡ ತನಿಖಾಧಿಕಾರಿ
Photo credit: PTI
ಬೆಂಗಳೂರು: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಮ್ಯಾಜಿಸ್ಟ್ರೇಟ್ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಬುಧವಾರ 14 ಮಂದಿ ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಜಿ.ಜಗದೀಶ್ ಕೆ.ಜಿ.ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಗಾಯಾಳುಗಳನ್ನು ಕರೆಯಿಸಿಕೊಂಡು ಹೇಳಿಕೆ ದಾಖಲಿಸಿಕೊಂಡರು.
ಹೇಳಿಕೆ ನೀಡಿದ ಬಳಿಕ ಗಾಯಾಳು ಮೋನಿಶ್‍ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳು ನೀಡಿದ ನೋಟಿಸ್ ಮೇರೆಗೆ ನನ್ನ ಹೇಳಿಕೆ ದಾಖಲಿಸಿದ್ದೇನೆ. ಘಟನೆ ಬಗ್ಗೆ ಪ್ರಾಥಮಿಕ ಮಾಹಿತಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಸಮಂಜಸವಾಗಿ ಉತ್ತರಿಸಿದ್ದೇನೆ ಎಂದರು.
ಈ ಘಟನೆಗೆ ಆರ್‌ಸಿಬಿ ಆಡಳಿತ ಮಂಡಳಿ ಹಾಗೂ ಸರಕಾರದ ತಪ್ಪಿದೆ. ಏಕಕಾಲದಲ್ಲಿ ಎರಡೂ ಕಡೆ ಕಾರ್ಯಕ್ರಮ ಆಯೋಜಿಸಬಾರದಾಗಿತ್ತು. ಎರಡು ದಿನ ಬಿಟ್ಟು ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು. ವಿಧಾನಸೌಧದ ಬಳಿ ಹೆಚ್ಚಿನ ಪೊಲೀಸರಿದ್ದರೆ, ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು. ಇನ್ಮುಂದೆ ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸಲು ಭಯವಾಗುತ್ತದೆ. ಮುಂಚಿತವಾಗಿ ಟಿಕೆಟ್ ನೀಡಿದ್ದರೆ ಅನಾಹುತ ಆಗುತ್ತಿರಲಿಲ್ಲ ಎಂದು ಗಾಯಾಳು ಮೋನಿಶ್‍ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರೀಡಾಂಗಣಕ್ಕೆ ಪೊಲೀಸ್ ಆಯುಕ್ತರ ಭೇಟಿ:
ಕಾಲ್ತುಳಿತ ಸಂಬಂಧ ನೂತನ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ದುರಂತ ಸಂಭವಿಸಿದ ಗೇಟ್‍ಗಳ ಬಳಿ ತೆರಳಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.