ಗಂಗಾವತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ : ಸಿಎಂ ಸಿದ್ದರಾಮಯ್ಯ ವಿಶ್ವಾಸ
ಬೆಂಗಳೂರು : ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ ಆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಿಶ್ಚಿತವಾಗಿಯೂ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಜನಾರ್ಧನ ರೆಡ್ಡಿ ಅವರಿಗೆ ಕೋರ್ಟ್ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಸಂವಿಧಾನದಂತೆ ಅವರು ಅನರ್ಹರಾಗುತ್ತಾರೆ. ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ, ಪಕ್ಷದ ತೀರ್ಮಾನದಂತೆ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಗಂಗಾವತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತ ಗೆಲ್ಲುತ್ತದೆ. ಪ್ರಜಾಪ್ರಭುತ್ವದಲ್ಲಿ ಟೀಕಿಸುವುದು ಸಹಜ. ಆದರೆ ನಮ್ಮ ಸರಕಾರದ ಸಾಧನೆ, ನಮ್ಮ ಬದ್ಧತೆಯ ಬಗ್ಗೆ ಜನರಿಗೆ ತಿಳಿದೇ ತಿಳಿಯುತ್ತದೆ ಎಂದರು.
ಶಿಕ್ಷೆಯಾಗಬೇಕು : ‘2008-2013 ರವರೆಗೆ ವಿಪಕ್ಷ ನಾಯಕನಾಗಿ, ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ಅವರ ಅಕ್ರಮ ಗಣಿಗಾರಿಕೆಯ ವರದಿ ಆಧರಿಸಿ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಅಂದು ಬಿಜೆಪಿ ಸರಕಾರದ ಅದನ್ನು ವಿರೋಧಿಸಿತ್ತು. ಅಂದು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ಹೋರಾಟಕ್ಕೆ ಇಂದು ಫಲ ದೊರೆತಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗಬೇಕು ಹಾಗೂ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಆರೆಸೆಸ್ಸ್ ಸಿದ್ದಾಂತವನ್ನು ಸದಾ ವಿರೋಧಿಸಿದ್ದೇನೆ :
‘ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಗೆಲ್ಲಲು ತನಗೆ ಸಹಾಯ ಮಾಡಿದ್ದರು’ ಎಂಬ ಜನಾರ್ಧನ ರೆಡ್ಡಿ ಹೇಳಿಕೆ ಅಪ್ಪಟ ಸುಳ್ಳು. ಅವರು ಬಿಜೆಪಿ ಪಕ್ಷದವರಾಗಿದ್ದು, ಅವರಿಗೆ ಸಹಾಯ ಮಾಡಲು ಹೇಗೆ ಸಾಧ್ಯ. ನಾನು ನನ್ನ ರಾಜಕೀಯ ಜೀವನದುದ್ದಕ್ಕೂ ಬಿಜೆಪಿ ಹಾಗೂ ಆರೆಸೆಸ್ಸ್ ಸಿದ್ದಾಂತವನ್ನು ವಿರೋಧಿಸುತ್ತಾ ಬಂದಿದ್ದೇನೆ ಎಂದು ಅವರು ನುಡಿದರು.