ದೇವನಹಳ್ಳಿ | ಪ್ರೀತಿಯ ವಿಚಾರಕ್ಕೆ ಯುವಕನನ್ನು ಕಾರಿನಲ್ಲಿ ಅಪಹರಿಸಿ ಹತ್ಯೆ
Update: 2025-05-04 18:21 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ಪ್ರೀತಿಯ ವಿಚಾರಕ್ಕೆ ಯುವಕನನ್ನು ಕಾರಿನಲ್ಲಿ ಅಪಹರಿಸಿ ಆರೋಪಿಗಳು ಹತ್ಯೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ವರದಿಯಾಗಿದೆ.
ನೀರುಗುಂಟೆಪಾಳ್ಯ ಗ್ರಾಮದ ಪ್ರೀತಂ(19) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.
ಮೃತ ಯುವಕ ಪ್ರೀತಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಯುವತಿ ಎಂಬಿಬಿಎಸ್ ಓದುತ್ತಿದ್ದಳು. ಪ್ರೀತಿ ವಿಚಾರ ತಿಳಿದು ಯುವಕನಿಗೆ ಯುವತಿ ಸಂಬಂಧಿಕರು ತಿಳಿ ಹೇಳಿದ್ದರು. ಹೀಗಿದ್ದರೂ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಮೇ 2ರ ಶುಕ್ರವಾರ ರಾತ್ರಿ ಪ್ರೀತಂನನ್ನು ಯುವತಿಯ ಕುಟುಂಬಸ್ಥರು ಅಪಹರಿಸಿ ಹತ್ಯೆಗೈದಿರುವುದಾಗಿ ಎಂದು ತಿಳಿದುಬಂದಿದೆ.
ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.