ಅ.2ಕ್ಕೆ ಮಾತ್ರ ಬಿಜೆಪಿಯವರಿಗೆ ಗಾಂಧೀಜಿ ನೆನಪು : ದಿನೇಶ್ ಗುಂಡೂರಾವ್
ಬೆಂಗಳೂರು : ಮಹಾತ್ಮಾ ಗಾಂಧೀಜಿ ಅವರ ಸಿದ್ಧಾಂತದ ಬಗ್ಗೆ ಬಿಜೆಪಿಯವರಿಗೆ ಯಾವುದೇ ಗೌರವವಿಲ್ಲ. ಅ.2ರಂದು ಗಾಂಧೀಜಿ ಜಯಂತಿ ಬಂದಾಗ ಮಾತ್ರ ನೆಪಕ್ಕೆ ಅವರಿಗೆ ಗಾಂಧಿ ನೆನಪಾಗುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಕುಟುಂಬದವರು ನಕಲಿ ಗಾಂಧಿ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಸ್ವತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್‍ನ ಹೆಡ್ಗೆವಾರ್ ಏನು ಮಾಡುತ್ತಿದ್ದರು, ಸಾವರ್ಕರ್ ಏನು ಮಾಡಿದರೆಂದು ದೇಶಕ್ಕೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಸ್ವತಂತ್ರ್ಯ ಸಂಗ್ರಾಮದ ವೇಳೆ ಸಾವರ್ಕರ್ ನಿವೃತ್ತಿಯಾಗಿದ್ದರು. ಅವರ ಇತಿಹಾಸ ತೆಗೆದು ನೋಡಿ. ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಅವರು ಹಗುರವಾಗಿ ಮಾತನಾಡಬಾರದು. ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಧೀಮಂತ ನಾಯಕರ ಪಕ್ಷ ನಮ್ಮದು, ಅಶೋಕ್ ಘನತೆಯಿಂದ ಮಾತನಾಡುವುದುನ್ನು ಕಲಿತುಕೊಳ್ಳಲಿ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಜೆಪಿಯವರಿಗೆ ಈ ಮೊದಲಿನಿಂದಲೂ ಅರ್ಥವಿಲ್ಲದೆ ಮಾತನಾಡುವ ಅಭ್ಯಾಸವಿದೆ. ಗಾಂಧಿ ಕುಟುಂಬವು ಈ ದೇಶಕ್ಕಾಗಿ ಅಪಾರ ಕೊಡುಗೆ ನೀಡಿದೆ. ಮೋತಿಲಾಲ್, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಬೇಕಾದಷ್ಟು ಕೆಲಸ ಮಾಡಿದ್ದಾರೆ. ಸ್ವತಂತ್ರ ಸಂಗ್ರಾಮದಲ್ಲಿ ಗಾಂಧಿ ಕುಟುಂಬ ತ್ಯಾಗ, ಬಲಿದಾನ ನೀಡಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.