×
Ad

ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆಗಳು ಶೀಘ್ರದಲ್ಲೇ ಭರ್ತಿ: ದಿನೇಶ್ ಗುಂಡೂರಾವ್

Update: 2025-01-23 21:53 IST

ರಾಮನಗರ : ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರು ಮತ್ತು ಅಗತ್ಯ ಸಿಬ್ಬಂದಿಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಗುರುವಾರ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ನರ್ಸ್‍ಗಳು, ಪ್ರಯೋಗಾಲಯ ಸಿಬ್ಬಂದಿಗಳು, ತಂತ್ರಜ್ಞರು ಹಾಗೂ ಗ್ರೂಪ್ ‘ಡಿ’ ನೌಕರರನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗಳನ್ನು ಹೊರಗಡೆ ಮಾಡಿಸಿಕೊಂಡು ಬರಲು ಚೀಟಿ ನೀಡುತ್ತಿರುವುದಾಗಿ ದೂರುಗಳು ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳಿಗೆ ಹೊರಗಡೆ ಪರೀಕ್ಷೆ ಮಾಡಿಸಿಕೊಂಡು ಬರಲು ಸೂಚಿಸಬಾರದು ಎಂದು ಅವರು ಹೇಳಿದರು.

ಆಸ್ಪತ್ರೆಗೆ ಅಗತ್ಯವಿರುವ ಹೊಸ ಯಂತ್ರೋಪಕರಣಗಳನ್ನು ತುರ್ತಾಗಿ ಪೂರೈಸಲಾಗುವುದು ಹಾಗೂ ಆಸ್ಪತ್ರೆಯಲ್ಲಿ ಲಭ್ಯವಿರುವ ಯಂತ್ರೋಪಕರಣಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ವಾರ್ಷಿಕ ನಿರ್ವಹಣೆಯನ್ನು ಅರ್ಹ ಯಂತ್ರೋಪಕರಣಗಳ ನಿರ್ವಾಹಕರಿಂದ ಮಾಡಿಸುವಂತೆ ದಿನೇಶ್ ಗುಂಡೂರಾವ್ ಸೂಚಿಸಿದರು.

ತಾಲೂಕು ಆಸ್ಪತ್ರೆಯು ತುಂಬಾ ಹಳೆಯದಾಗಿದ್ದು ಅದನ್ನು ದುರಸ್ತಿ ಮಾಡಿಸಲು ಸಾಧ್ಯವಿಲ್ಲ. ಆದುದರಿಂದ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ವೈದ್ಯರು, ನರ್ಸ್‍ಗಳು, ಪ್ರಯೋಗಾಲಯ ಸಿಬ್ಬಂದಿಗಳು, ತಂತ್ರಜ್ಞರು ಹಾಗೂ ಗ್ರೂಪ್ ‘ಡಿ’ ನೌಕರರನ್ನು ನೇಮಿಸಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅವರು ತಿಳಿಸಿದರು.

ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಯಂತ್ರ ಮ್ಯಾಮೋಗ್ರಫಿಯನ್ನು ಉದ್ಪಾಟಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಆಸ್ಪತ್ರೆಯ ಸೌಲಭ್ಯಗಳ ಕುರಿತು ಹೊರ ರೋಗಿಗಳೊಂದಿಗೆ ವಿಚಾರಣೆ ನಡೆಸಿದರು.

ಜಿಲ್ಲಾಸ್ಪತ್ರೆಯ ಆವರಣದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ದಿನೇಶ್ ಗುಂಡೂರಾವ್, ಪ್ರಸ್ತುತ ಆಸ್ಪತ್ರೆಯಲ್ಲಿ 8 ಐ.ಸಿ.ಯು., 7 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಹೆಚ್ಚು ಮಾಡಲು ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News