×
Ad

ಮಾಗಡಿ ತಾಲೂಕು ಆಸ್ಪತ್ರೆ ನವೀಕರಣಕ್ಕೆ 4 ಕೋಟಿ ರೂ.ಬಿಡುಗಡೆ : ದಿನೇಶ್ ಗುಂಡೂರಾವ್

Update: 2025-01-31 23:53 IST

ಬೆಂಗಳೂರು : ರಾಮನಗರ ಜಿಲ್ಲೆಯ ಮಾಗಡಿಯ ತಾಲ್ಲೂಕು ಆಸ್ಪತ್ರೆಯ ನವೀಕರಣಕ್ಕೆ ಈಗಾಗಲೇ 4 ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದು, ಅದರಲ್ಲಿ ಯುಜಿಡಿ, ಎಲೆಕ್ಟ್ರಿಕಲ್ ಸೇರಿದಂತೆ ವಿವಿಧ ರೀತಿಯ ದುರಸ್ಥಿ ಕೆಲಸ ಕಾರ್ಯಗಳನ್ನು ಶೀಘ್ರದಲ್ಲೇ ಟೆಂಡರ್ ಕರೆದು ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಶುಕ್ರವಾರ ಮಾಗಡಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಪ್ರಯೋಗ ಶಾಲೆ (ಬಿ.ಪಿ.ಎಚ್)ಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ತಾಲೂಕು ಆಸ್ಪತ್ರೆಯ ಕೆಲವು ಕಟ್ಟಡಗಳು ಹಳೆಯದಾಗಿದೆ. ಹೊಸ ಕಟ್ಟಡಗಳನ್ನು ನಿರ್ಮಿಸಿಕೊಡುವಂತೆ ಮನವಿಗಳು ಬಂದಿವೆ, ಕೆಲವೊಂದನ್ನು ಮೇಲ್ದರ್ಜೇಗೇರಿಸಬೇಕು, ಅದರೊಂದಿಗೆ ಮಾಗಡಿ ತಾಲೂಕು ಆಸ್ಪತ್ರೆಯ ಕಟ್ಟಡವನ್ನು ಆ ಪಟ್ಟಿಗೆ ಸೇರಿಸಿಕೊಂಡು ಬಜೆಟ್ ಸಂದರ್ಭದಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಎಷ್ಟು ಪ್ರಮಾಣದ ಹೆರಿಗೆಯಾಗುತ್ತದೆ ಎನ್ನುವುದನ್ನು ಆಧರಿಸಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನೀಡಲಾಗುವುದು, ಪ್ರತಿ ತಿಂಗಳು 100-150 ಹೆರಿಗೆಯಾದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಒದಗಿಸಲಾಗುವುದು, ಇಲ್ಲಿನ ಗರ್ಭಿಣಿಯರು ಹೆರಿಗೆಗೆ ಹತ್ತಿರದಲ್ಲಿರುವ ಬೆಂಗಳೂರು ಅಥವಾ ಸೋಲೂರಿಗೆ ಹೋಗುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಾಗಡಿ ತಾಲೂಕು ಆಸ್ಪತ್ರೆಯಲ್ಲಿ ಬ್ಲಾಕ್ ಮಟ್ಟದ ಪ್ರಯೋಗಾಲಯವನ್ನು ಉದ್ಘಾಟಿಸಲಾಗಿದೆ. ಇದನ್ನು ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ಪರೀಕ್ಷೆಗಳನ್ನು ಒಂದೇ ಸ್ಥಳದಲ್ಲಿ ಮಾಡಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯ ಕುರಿತು ಈಗಾಗಲೇ ಮುಖ್ಯಮಂತ್ರಿ ಸಭೆ ಕರೆದು ಚರ್ಚೆ ಮಾಡಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜ್ ಗಾಣಕಲ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್, ಮಾಗಡಿ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್, ತಾಲೂಕು ಆರೋಗ್ಯ ಅಧಿಕಾರಿಗಳು, ತಜ್ಞವೈದ್ಯರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News