ಮುನಿರತ್ನ ನೀಚ ವ್ಯಕ್ತಿ, ದ್ವೇಷದ ರಾಜಕಾರಣಿ : ಡಿ.ಕೆ.ಸುರೇಶ್
ಬೆಂಗಳೂರು : ‘ಬಿಜೆಪಿ ಶಾಸಕ ಮುನಿರತ್ನ ನಮ್ಮ ವಿರುದ್ಧ ಇಲ್ಲಸಲ್ಲದ್ದನ್ನು ಮಾತನಾಡುವುದು ಮುಂದುವರೆಸಿದರೆ, ಆತನ ವಿರುದ್ಧ ಇರುವ ಪ್ರಕರಣದ ಮಾಹಿತಿಗಳನ್ನು ರಾಜರಾಜೇಶ್ವರಿ ನಗರ ಕ್ಷೇತ್ರದ ಪ್ರತಿ ಮನೆ ಮನೆಗೆ ಹಂಚಬೇಕಾಗುತ್ತದೆ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಮುನಿರತ್ನ ಕರ್ಮಕಾಂಡಗಳನ್ನು ನಮ್ಮ ಕಾರ್ಯಕರ್ತರು ಕ್ಷೇತ್ರದಲ್ಲಿ ನಿರಂತರವಾಗಿ ಹಂಚಲಿದ್ದಾರೆ. ಒಕ್ಕಲಿಗರ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯಲು ಆತನಿಗೆ ನಾಚಿಕೆಯಾಗುವುದಿಲ್ಲವೇ? ಮತಕ್ಕಾಗಿ ದಲಿತರನ್ನು ಬಳಸಿಕೊಂಡು ಅವರಿಗೆ ಅವಾಚ್ಯವಾಗಿ ನಿಂದಿಸುತ್ತಾನೆ. ಮಾಧ್ಯಮದವರ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ವಾಗ್ದಾಳಿ ನಡೆಸಿದರು.
ಮುನಿರತ್ನ ನಡೆಸಿದ ಕಾಮಗಾರಿಯ ಕಾಂಪೌಂಡ್ ವಾಲ್ ಬಿದ್ದು ವಿದ್ಯಾರ್ಥಿನಿ ಸತ್ತ ವಿಚಾರವಾಗಿ ಮಾತನಾಡಲೇ? ಆ ಸಂದರ್ಭದಲ್ಲಿ ಆತನ ವಿರುದ್ಧ ಪತ್ರಿಕೆಯಲ್ಲಿ ನೂರು ಸಂಚಿಕೆಗಳು ಬಂದಿದ್ದವು. ಇನ್ನು ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಬಿತ್ತಲ್ಲ ಅದರ ಬಗ್ಗೆ ಮಾತನಾಡಲೇ?. ರಾಜರಾಜೇಶ್ವರಿನಗರ ಕ್ಷೇತ್ರದ ಜನ ಆತನನ್ನು ಶಾಸಕ, ಮಂತ್ರಿ ಮಾಡಿದರು ಎಂದು ವಿಧಾನಸೌಧದ ಮೂರನೆ ಮಹಡಿಯಲ್ಲಿ ಹೆಣ್ಣುಮಗಳನ್ನು ಅತ್ಯಾಚಾರ ಮಾಡಿರುವ ಬಗ್ಗೆ ವರದಿಗಳಿವೆ ಎಂದು ಹೇಳಲೇ? ಅವರು ಬಿಜೆಪಿಯ ಕಿರೀಟ ಎಂದು ಹೇಳಲೇ? ಎಂದು ಪ್ರಶ್ನಿಸಿದರು.
ಅಮಾನತುಗೊಂಡ ಶಾಸಕ: ಏಡ್ಸ್ ಸೋಂಕಿತರನ್ನು ಬಳಸಿ ಬೇರೆಯವರಿಗೆ ಏಡ್ಸ್ ಹರಡಿಸಲು ಷಡ್ಯಂತ್ರ ರೂಪಿಸಿರುವ ಬಗ್ಗೆ ವರದಿಗಳಿವೆಯಲ್ಲ. ಉಪಮುಖ್ಯಮಂತ್ರಿಗಳು ನನ್ನ ಕ್ಷೇತ್ರದಲ್ಲಿ ಬಂದು ಪೋಸ್ಟರ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆಂದು ಹೇಳುತ್ತಾನೆ. ಆತ ಅಮಾನತುಗೊಂಡಿರುವ ಶಾಸಕ. ಆತನನ್ನು ಯಾವುದಕ್ಕೂ ಕರೆಯದೇ ಕೆಲಸ ಮಾಡಬೇಕು. ಡಿಸಿಎಂ ಅವರು ಗೌರವಯುತವಾಗಿ ಎಲ್ಲ ಶಾಸಕರನ್ನು ಕರೆದಿದ್ದಾರೆ. ತಾನು ಅಮಾನತುಗೊಂಡಿದ್ದೇನೆಂದು ಆತನಿಗೆ ತಿಳಿದಿಲ್ಲವೇ? ಎಂದರು.
ಮೆಂಟಲ್ ಆಗಿದ್ದಾನೆ: ಲಂಚ ಕೇಳುವುದು, ಒಕ್ಕಲಿಗರ ಮನೆ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವುದು ಈತ. ಶೂಟಿಂಗ್ ಮಾಡಲು ಹೋಗಿ ಮೊಟ್ಟೆಯಲ್ಲಿ ಹೊಡೆಸಿಕೊಂಡು ಮೆಂಟಲ್ ಆಗಿದ್ದಾನೆ. ಈತನಿಗೆ ಮಾನ ಮರ್ಯಾದೆ ಇದೆಯಾ? ಪ್ರಧಾನಮಂತ್ರಿ ಹಾಗೂ ಅವರ ತಾಯಿ ಬಗ್ಗೆ ಹಾಡಿಹೊಗಳಿರುವ ವಿಡಿಯೋಗಳಿವೆ. ಪ್ರಧಾನಮಂತ್ರಿ ಮನೆಯಲ್ಲಿ 132 ಕೊಠಡಿಗಳಿವೆ ಆದರೂ ತಾಯಿ, ಹೆಂಡತಿಗೆ ಊಟ ಹಾಕಲು ಆಗುವುದಿಲ್ಲ ಎಂದವನು ಈತ. ತನ್ನ ಅಪ್ಪ-ಅಮ್ಮನ ಸಮಾಧಿಗೆ ಪೂಜೆ ಮಾಡದವನು, ಬೇರೆಯವರ ಸಮಾಧಿಗೆ ಹೋಗಿ ಪೂಜೆ ಮಾಡುತ್ತಾನೆ. ಎಂತಹಾ ಕಲಾವಿದ? ಎಂದು ವಾಗ್ದಾಳಿ ನಡೆಸಿದರು.
‘ಮುನಿರತ್ನ ನೀಚ ವ್ಯಕ್ತಿ, ದ್ವೇಷದ ರಾಜಕಾರಣಿ. ನಾನು ಇದುವರೆಗೂ ಎಂದೂ ಆತನ ಬಗ್ಗೆ ಮಾತನಾಡಿಲ್ಲ. ನಮ್ಮ ವಿರುದ್ಧ ದೂರು ನೀಡಿದರೆ ಹಿರೋ ಆಗಬಹುದು ಎಂದು ಆತ ಭಾವಿಸಿದ್ದಾನೆ. ಗುತ್ತಿಗೆ ಸಿಗಲಿಲ್ಲ ಎಂದು ಈಡಿಗೆ ದೂರು ನೀಡಿದ್ದಾನೆ. ಅದನ್ನು ಬಿಟ್ಟು ಬೇರೇನು ಮಾಡಿದ್ದಾನೆ. ಕಳ್ಳ ಬಿಲ್ ಬರೆಸಿಕೊಂಡು ದರ್ಬಾರು ಮಾಡುತ್ತಿದ್ದ. ಈಗ ಎಲ್ಲವೂ ಬಿಗಿಯಾಗಿದೆ ಅದಕ್ಕೆ ಈಡಿಗೆ ದೂರು ನೀಡಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.