ಬೆಂಗಳೂರು | ಮದುವೆ ಹೆಸರಿನಲ್ಲಿ ಮಹಿಳಾ ಕಾನ್ಸ್‌ಟೇಬಲ್‍ಗೆ 18 ಲಕ್ಷ ರೂ. ವಂಚನೆ
ಬೆಂಗಳೂರು : ವಿವಾಹಯಾಗುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಕಾನ್ಸ್‌ಟೇಬಲ್ ಬಳಿ 18 ಲಕ್ಷ ರೂ ಪಡೆದು ವಂಚಿಸಿರುವ ಆರೋಪ ಸಂಬಂಧ ಇಲ್ಲಿನ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಜೀವನ ಸಂಗಾತಿಯನ್ನು ಹುಡುಕುತ್ತಿರುವಾಗ ಅಶೋಕ್ ಮುಸ್ತಿ ಎಂಬಾತ ಪರಿಚಯವಾಗಿದ್ದು, ಸರಕಾರಿ ಉದ್ಯೋಗಕ್ಕಾಗಿ ತಯಾರು ಮಾಡುತ್ತಿದ್ದೇನೆ ಎಂದು ನಂಬಿಸಿ ಆತ ಮನೆಗೂ ಬಂದು ಮದುವೆ ಆಗುವುದಾಗಿ ಭರವಸೆ ನೀಡಿದ್ದ. ಆನಂತರ, ವರದಕ್ಷಿಣೆಯಾಗಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಇದನ್ನು ನಂಬಿ ಆತ ಹೇಳಿದ ಬ್ಯಾಂಕ್ ಖಾತೆಗೆ 18 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ನಂತರ ಏಕಾಏಕಿ ಮದುವೆ ನಿರಾಕರಿಸಿದಾಗ ಹಣ ವಾಪಸ್ ನೀಡುವಂತೆ ಕೇಳಿದಾಗ ಮೊಬೈಲ್ ಸಂಪರ್ಕ ಕಡಿತಗೊಳಿಸಿ ನಾಪತ್ತೆಯಾಗಿದ್ದಾನೆ. ಈ ಸಂಬಂಧ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.