ಬೆಂಗಳೂರು | ಕುಂಭಮೇಳ ಪ್ರವಾಸ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ
Update: 2025-03-10 20:03 IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಾ ಕುಂಭಮೇಳ ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ವಂಚಿಸಿ ಆ ಹಣದಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ರಾಘವೇಂದ್ರ ರಾವ್ ಎಂಬಾತನನ್ನು ಇಲ್ಲಿನ ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟೂರ್ಸ್ ಮತ್ತು ಟ್ರಾವೆಲ್ಸ್ ಕಂಪೆನಿಯ ಪ್ರತಿನಿಧಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಜಾಹೀರಾತು ನೀಡಿದ್ದ ಆರೋಪಿ, ಸಾರ್ವಜನಿಕರಿಂದ ಹಣ ಪಡೆದು ಟಿಕೆಟ್ ಬುಕ್ ಮಾಡದೇ ವಂಚಿಸಿದ್ದ ಎನ್ನಲಾಗಿದೆ. ಈ ಸಂಬಂಧ ದಾಖಲಾಗಿದ್ದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಅನೇಕ ಜನರಿಗೆ ವಂಚಿಸಿದ ಪರಿಣಾಮ ಬಂದ ಹಣದಲ್ಲಿ ಆರೋಪಿ ಬೆಟ್ಟಿಂಗ್ ಆಡಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಬಂಧಿತನ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.