×
Ad

ಮುಸ್ಲಿಮರ ವಿರುದ್ಧ ದ್ವೇಷ ಬಿತ್ತಲು ವಕ್ಫ್ ತಿದ್ದುಪಡಿ ಬಳಕೆ : ಕೆ.ಎನ್.ಉಮೇಶ್

Update: 2025-05-11 23:55 IST

ಬೆಂಗಳೂರು : ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ಹಿಂದೆ ಮುಸ್ಲಿಮ್ ಸಮುದಾಯವನ್ನು ದಮನಿಸುವ ಸಂಚು ಮಾತ್ರವಲ್ಲದೆ, ಇಡೀ ಸಮುದಾಯದ ವಿರುದ್ಧ ಉದ್ದೇಶ ಪೂರಕವಾಗಿ ದ್ವೇಷ ಬಿತ್ತಲು ಉಪಯೋಗಿಸಲಾಗುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಮಿಷನ್ ರಸ್ತೆಯ ಸಿಎಸ್‍ಐ ಕಟ್ಟಡದ ಸೌಹಾರ್ದ ಸಭಾಂಗಣದಲ್ಲಿ ಇನ್ಸಾಫ್ ಕರ್ನಾಟಕ (ಬೆಂಗಳೂರು) ವತಿಯಿಂದ ಹಮ್ಮಿಕೊಂಡಿದ್ದ ‘ವಕ್ಫ್ ಮಸೂದೆ ತಿದ್ದುಪಡಿ-2025 ಉದ್ದೇಶ ಹಾಗೂ ಪರಿಣಾಮಗಳ ಕುರಿತ ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಮುಸ್ಲಿಮರು ಮತ್ತು ರೈತರು, ದಮನಿತ, ಶೋಷಿತ ಜನಾಂಗದ ನಡುವೆ ಅವಿನಾಭಾವ ಸಂಬಂಧ ಇವೆ. ಆದರೆ, ರೈತರ ಮತ್ತು ಶೋಷಿತರ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಸಿದುಕೊಳ್ಳಲಾಗುತ್ತಿದೆ ಎಂಬ ಸುಳ್ಳು ಹಬ್ಬಿಸಿ ಮುಸ್ಲಿಮರ ವಿರುದ್ದ ಅಪನಂಬಿಕೆ ಸೃಷ್ಟಿಸುವ ಕೆಲಸವನ್ನು ಬಿಜೆಪಿ ವ್ಯವಸ್ಥಿತವಾಗಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಭಾವನೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.

ಇನ್ನೊಂದೆಡೆ, ತ್ರಿವಳಿ ತಲಾಖ್, ವಕ್ಫ್ ತಿದ್ದುಪಡಿ ಮೊದಲಾದ ಮಾರಕ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಕೇಂದ್ರ ಸರಕಾರ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿಯುತ್ತಿದೆ. ಸರಕಾರದ ನೀತಿಯ ವಿರುದ್ಧ ಮುಸ್ಲಿಮರು ನಡೆಸುವ ಸಂವಿಧಾನ ಬದ್ಧ ಹೋರಾಟವನ್ನು ದೇಶ ಮತ್ತು ಹಿಂದೂಗಳ ವಿರುದ್ಧ ನಡೆಯುತ್ತಿರುವ ಹೋರಾಟ ಎಂದು ಬಿಂಬಿಸಲಾಗುತ್ತಿದೆ. ಈ ಮೂಲಕ ಹಿಂದೂ ಮುಸ್ಲಿಮರನ್ನು ವಿಭಜಿಸಿ ಮತ ಬ್ಯಾಂಕ್ ಗಟ್ಟಿಗೊಳಿಸುವಲ್ಲಿ ಪದೇ ಪದೇ ಬಿಜೆಪಿ ಯಶಸ್ಸು ಕಾಣುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಪ್ರಮುಖವಾಗಿ ದೇಶದ ಭೂಮಿಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಪ್ರಕ್ರಿಯೆ 1991ರಿಂದ ಆರಂಭವಾಗಿದ್ದು, ಕಳೆದ ಒಂದು ದಶಕದಲ್ಲಿ ಇದರ ಪ್ರಮಾಣ ಭಾರೀ ಏರಿಕೆ ಕಂಡಿದೆ. ದೇಶದ ಮುಂಬೈ, ಬೆಂಗಳೂರಿನಂತಹ ಮಹಾ ನಗರಗಳಲ್ಲಿರುವ ಬೆಲೆಬಾಳುವ ಭೂಮಿಯ ಮೇಲೆ ಬಂಡವಾಳಶಾಹಿಗಳ ಕಣ್ಣು ಬಿದ್ದಿದ್ದು ಇದನ್ನು ತಮ್ಮ ವಶಕ್ಕೆ ಪಡೆಯಲು ವಕ್ಫ್ ತಿದ್ದುಪಡಿ ಕಾಯ್ದೆ ಅವರಿಗೆ ನೆರವಾಗಲಿದೆ ಎಂದು ಅವರು ತಿಳಿಸಿದರು.

ಒಟ್ಟಾರೆ, ಸಂವಿಧಾನದ ಮೂಲಕವೇ ಅಧಿಕಾರಕ್ಕೆ ಬಂದು ಸಂವಿಧಾನವನ್ನೆ ಬುಡಮೇಲು ಮಾಡಲು ಹೊರಟ ಬಿಜೆಪಿಯ ವಿರುದ್ಧದ ಹೋರಾಟಕ್ಕೆ ಸಂವಿಧಾನದ ಪರ, ನ್ಯಾಯದ ಪರ, ದೇಶದ ಪರ ಇರುವ ಪ್ರತಿಯೊಬ್ಬರೂ ಧ್ವನಿಗೂಡಿಸಬೇಕು ಎಂದ ಅವರು, ರೈತ, ಕಾರ್ಮಿಕ, ಅಲ್ಪಸಂಖ್ಯಾತ ಕಾನೂನುಗಳಿಗೆ ತಿದ್ದುಪಡಿ ತಂದು ಪುನರ್ ರಚನೆ ಮಾಡುವ ಮೂಲಕ ಮುಂದೆ ಸಂವಿಧಾನವನ್ನೆ ಪುನರ್ ರಚನೆ ಮಾಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದರು.

ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಸೈಯದ್ ಶಫೀಉಲ್ಲಾ ಸಾಬ್ ಮಾತನಾಡಿ, ಬಿಜೆಪಿ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ನಾವು ರೈತ ಪರ ಎಂದಂತೆ, ಮುಸ್ಲಿಮ್ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ನಾವು ಮುಸ್ಲಿಮರ ಪರ ಎನ್ನುತ್ತಿದೆ. ಆದರೆ, ವಕ್ಫ್ ತಿದ್ದುಪಡಿ ಕಾಯ್ದೆ ಮುಸ್ಲಿಮರ ಮೇಲೆ ನಡೆಸಿರುವ ಪ್ರಹಾರವಾಗಿದೆ. ಕಾಯ್ದೆಯ ಬಗ್ಗೆ ಹಲವು ಸುಳ್ಳುಗಳನ್ನು ಹೇಳಿ ಮುಸ್ಲಿಮರನ್ನು ಒಪ್ಪಿಸುವ ಹುನ್ನಾರ ಕೇಂದ್ರ ಸರಕಾರ ನಡೆಸುತ್ತಿದೆ ಎಂದು ತಿಳಿಸಿದರು.

ಇನ್ನೂ, ಬಡ ಮುಸ್ಲಿಮರ ಮೇಲೆ ಕಾಳಜಿ ತೋರಿಸುವ ಬಿಜೆಪಿ ಬಡ ಹಿಂದೂ, ಇತರೆ ಸಮುದಾಯದ ಮೇಲೆ ಏಕೆ ತೋರಿಸುತ್ತಿಲ್ಲ. ಮುಜರಾಯಿ ಮತ್ತು ಕ್ರೈಸ್ತ ದತ್ತಿ ಭೂಮಿಯನ್ನು ಶ್ರೀಮಂತರು ಕಬಳಿಸಿರುವ ಪ್ರಕರಣಗಳು ಕೂಡಾ ಇವೆ. ಮುಜರಾಯಿ ಮತ್ತು ಕ್ರೈಸ್ತ ದತ್ತಿ ಕಾಯ್ದೆಗೂ ತಿದ್ದುಪಡಿ ತಂದು ಆ ಧರ್ಮದಲ್ಲಿರುವ ಬಡವರ ಹಿತ ಯಾಕೆ ಕಾಪಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ವಿಶೇಷ ಕರ್ತವ್ಯಾಧಿಕಾರಿ ಮುಜೀಬುಲ್ಲಾ ಝಫಾರಿ ಮಾತನಾಡಿ, ಮುಸ್ಲಿಮ್ ಸಮುದಾಯಕ್ಕೆ ಈ ತಿದ್ದುಪಡಿ ಕಾಯ್ದೆಯ ದುಷ್ಪರಿಣಾಮದ ಆಳ ಅಗಲ ತಿಳಿದಿಲ್ಲ. ಈ ಕಾಯ್ದೆ ಜಾರಿಗೆ ಬಂದರೆ ಮುಸ್ಲಿಮ್ ಸಮುದಾಯ ಸಂಪೂರ್ಣ ನಿಶಕ್ತಿ ಹೊಂದಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ‘ತ್ರಿವಳಿ ತಲಾಖ್ ಕಾಯ್ದೆಯಿಂದ ಇಂದು ದೇಶದಲ್ಲಿ ಮುಸ್ಲಿಮ್ ಮಹಿಳೆಯರು ಸಂಕಷ್ಟಕ್ಕೆ ಸಿಲುಕುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿದೆ. ಆದರೂ ತ್ರಿವಳಿ ತಲಾಖ್ ಕಾಯ್ದೆ ಮೂಲಕ ನಾವು ಮುಸ್ಲಿಮ್ ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಇದೇ ಮಾದರಿಯಲ್ಲಿ ವಕ್ಫ್ ತಿದ್ದುಪಡಿ ಇಡೀ ಮುಸ್ಲಿಮ್ ಸಮುದಾಯವನ್ನು ದಮನಿಸುವ ಮತ್ತು ನಿಶಕ್ತಿಗೊಳಿಸುವ ಕಾಯ್ದೆಯಾಗಿದೆ ಎಂದರು.

ಬಿಜೆಪಿ ಅದನ್ನು ಬಡ ಮುಸ್ಲಿಮರ ರಕ್ಷಿಸುವ ಕಾಯ್ದೆ ಎಂದು ಹೇಳುತ್ತಿರುವುದು ದುರಂತವಾಗಿದೆ ಎಂದ ಅವರು, ತ್ರಿವಳಿ ತಲಾಖ್, ವಕ್ಫ್, ಏಕರೂಪ ನಾಗರಿಕ ಸಂಹಿತೆ ಮೊದಲಾದ ಕಾಯ್ದೆಗಳು ನೂರು ವರ್ಷಗಳ ಹಿಂದೆ ಆರೆಸ್ಸೆಸ್ ಸಿದ್ಧಪಡಿಸಿದ ಅಜೆಂಡಾವಾಗಿದೆ. ಇವೆಲ್ಲವೂ ನಾಗಪುರದಲ್ಲಿ ತೀರ್ಮಾನವಾಗಿ ಬಿಜೆಪಿ ಮೂಲಕ ದೇಶದಲ್ಲಿ ಜಾರಿಯಾಗುತ್ತಿದೆ. ಮುಸ್ಲಿಮರ ಒಪ್ಪಿಗೆ ಇಲ್ಲದ ಕಾನೂನುಗಳು ಮುಸ್ಲಿಮ್ ಪರವಾಗಿ ಹೇಗೆ ಸಾಧ್ಯ ಎಂದು ಅವರು ಕೇಳಿದರು.

ಕಾರ್ಯಕ್ರಮದಲ್ಲಿ ಚಿಂತಕಿ ಕೆ.ಎಸ್.ವಿಮಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಾಸಿಂ ಸಾಬ್, ಕೆ.ಎಸ್.ಲಕ್ಷ್ಮೀ, ಝವೀದ್ ಅಹ್ಮದ್, ಗೌರಮ್ಮ ಸೇರಿದಂತೆ ಹಲವು ಚಿಂತಕರು, ಹೋರಾಟಗಾರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News