‘ಒಳಮೀಸಲಾತಿ ಸಮೀಕ್ಷೆ’ ಲೋಪದೋಷಗಳನ್ನು ಸರಿಪಡಿಸಿ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒತ್ತಾಯ
ಬೆಂಗಳೂರು : ಒಳಮೀಸಲಾತಿ ಜಾರಿಗೆ ರಾಜ್ಯ ಸರಕಾರದಿಂದ ಪ್ರಾರಂಭವಾಗಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಹಲವು ಲೋಪ-ದೋಷಗಳು ಉಂಟಾಗಿವೆ. ಕೂಡಲೇ ಸಮಸ್ಯೆ ಪರಿಹರಿಸಿ ಗಣತಿ ಕಾರ್ಯ ನಿಖರವಾಗುವಂತೆ ಮಾಡಬೇಕು ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಮಂಗಳವಾರ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದ ನಿಯೋಗ ನಗರದಲ್ಲಿ ನ್ಯಾ.ಎಚ್.ಎನ್. ನಾಗಮೋಹನ್‍ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಭೇಟಿ ನೀಡಿ, ಮನವಿ ಸಲ್ಲಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಸಮೀಕ್ಷೆ ಪ್ರಾರಂಭದಿಂದಲೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಂಚರಿಸಿ ಮಾಹಿತಿ ಪಡೆಯಲಾಗಿದೆ. ಈ ವೇಳೆ ಕೆಲವು ಲೋಪಗಳು ಕಂಡು ಬಂದಿವೆ. ಜಾತಿ ಕಾಲಂನಲ್ಲಿ ಆದಿ-ಕರ್ನಾಟಕ, ಆದಿ-ದ್ರಾವಿಡ, ಆದಿ-ಆಂಧ್ರ ಕಡ್ಡಾಯವಾಗಿ ಆಯ್ಕೆ ಮಾಡಿದ ನಂತರ ಉಪ ಜಾತಿಯನ್ನಾಗಿ ಭೋವಿ-ವಡ್ಡರ ಆಯ್ಕೆ ಮಾಡಬಹುದೆಂದು ಜನರಿಗೆ ತಪ್ಪು ಮಾಹಿತಿಯನ್ನು ಸಮೀಕ್ಷೆದಾರರು ನೀಡುತ್ತಿದ್ದಾರೆ ಎಂದು ತಿಳಿಸಿದರು.
ವಲಸೆಯಲ್ಲಿರುವ ಕುಟುಂಬದವರು ಆಧಾರ್ ಸಂಖ್ಯೆ ನೀಡಿದರು, ಗಣತಿದಾರರಿಗೆ ಫೋನ್ ಮಾಡಿ ಹೇಳಿದರೂ, ಗಣತಿಯಲ್ಲಿ ಅವರನ್ನು ಪರಿಗಣಿಸುತ್ತಿಲ್ಲ. ಮಾಹಿತಿ ನೀಡಿದಾಗ ನಿಮ್ಮ ಫೋಟೊ ಬೇಕು ಎಂದು ಅವರ ಮಾಹಿತಿ ಪಡೆಯುತ್ತಿಲ್ಲ. ಆಯೋಗವು ಪಡಿತರ ಚೀಟಿ, ಆಧಾರ್ ಕಾರ್ಡ್ ಯಾವುದಾದರು ಒಂದನ್ನು ಪಡೆದು ಸಮೀಕ್ಷೆ ನಡೆಸಬಹುದಾಗಿದೆ ಎಂದು ತಿಳಿಸಿದ್ದರೂ, ಕೆಲವು ಕಡೆ ಸಮೀಕ್ಷೆದಾರರು ಕೇವಲ ಪಡಿತರ ಚೀಟಿಯನ್ನು ಪಡೆದು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಆಯೋಗವು ಭೋವಿ ಪದಕ್ಕೆ ಪರಿಶಿಷ್ಟ ಜಾತಿ ಕೋಡ್ ಸಂಖ್ಯೆ 23.1 ಎಂದು ಅವಕಾಶ ನೀಡಿದರೂ, ಕೂಡಾ ಕೆಲವು ಕಡೆ ಎಸ್‍ಸಿ ಅಲ್ಲದವರು ಎಂದು ಸಮೀಕ್ಷೆಯಿಂದ ದೂರ ಉಳಿಯುವಂತೆ ಮಾಡುತ್ತಿದ್ದಾರೆ. ಆಧಾರ್ ಕಾರ್ಡ್ ವಿಳಾಸ ಕರ್ನಾಟಕ ಇದ್ದಾಗ್ಯೂ ಬೇರೆ ರಾಜ್ಯದವರು ಎಂದು ಗಣತಿದಾರರು ಹೇಳಿ ಅವರನ್ನು ಗಣತಿಯಿಂದ ಕೈಬಿಡುತ್ತಿದ್ದಾರೆ. ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗೆ, ಸರಿಯಾದ ತರಬೇತಿ ನೀಡಿಲ್ಲ. ಪರಿಣಾಮವಾಗಿ ಅವರು ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯನ್ನು ತಕ್ಷಣ ನಿಲ್ಲಿಸಿ ಅವರಿಗೆ ಮತ್ತೊಮ್ಮೆ ಒಂದು ದಿನದ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ, ಭೋವಿ ನಿಗಮದ ಮಾಜಿ ಸದಸ್ಯ ಕಾಳಘಟ್ಟ ಹನುಮಂತಪ್ಪ, ನಿವೃತ್ತ ನ್ಯಾ. ವೆಂಕಟೇಶ್, ರವಿ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.