×
Ad

ಕೇಂದ್ರದಿಂದ ಅನುದಾನ ಬಿಡುಗಡೆ ವಿಳಂಬ : ರಾಜ್ಯದಲ್ಲಿ ನಿರಾವರಿ ಯೋಜನೆಗಳು ನೆನೆಗುದಿಗೆ : ಗೌರವ್‌ ಗುಪ್ತಾ

Update: 2025-05-13 23:00 IST

ಬೆಂಗಳೂರು : ಜಲಸಂಪನ್ಮೂಲ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಘೋಷಿತ ಅನುದಾನ ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ರಾಜ್ಯದ ನೀರಾವರಿ ಯೋಜನೆಗಳು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮಾಹಿತಿ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಹೊಸದಿಲ್ಲಿಯಲ್ಲಿನ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 2024-25 ಹಾಗೂ 2025-2026ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರಕಾರದ ಅನುದಾನ ಬಿಡುಗಡೆ ಮಾಹಿತಿ ಕುರಿತಂತೆ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದರೂ ಸಹ ಯೋಜನೆಗೆ ಅಗತ್ಯವಿರುವ 5600 ಕೋಟಿ ರೂ.ಗಳಲ್ಲಿ ಒಂದು ರೂಪಾಯಿಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ ಎಂದು ಅವರು ಹೇಳಿದರು.

ಕೃಷ್ಣಾ ಹಾಗೂ ತುಂಗಭದ್ರಾ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನೆರೆಯ ತೆಲಂಗಾಣ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಆಂಧ್ರ ಪ್ರದೇಶದ ಸರಕಾರ ನಕಾರಾತ್ಮಕ ಧೋರಣೆ ತಾಳಿದೆ. ಹೀಗಾಗಿ ನೀರಾವರಿ ಯೋಜನೆ ವಿಳಂಬವಾಗಿದೆ. ಕೇಂದ್ರ ಜಲಸಂಪನ್ಮೂಲ ಸಚಿವರು ಸಭೆ ಕರೆದರು ಸಹ ಆಂಧ್ರಪ್ರದೇಶದಿಂದ ಯಾರು ಭಾಗವಹಿಸುವುದಿಲ್ಲ ಎಂದು ಗೌರವ್ ಗುಪ್ತ ತಿಳಿಸಿದರು.

ಪ್ರಮುಖವಾಗಿ ಆಂಧ್ರಪ್ರದೇಶ ಮತ್ತು ತಮಿಳುನಾಡು ಸರಕಾರಗಳು ಕರ್ನಾಟಕದ ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಆಂಧ್ರಪ್ರದೇಶ ಹಾಗೂ ತಮಿಳುನಾಡು ಸರಕಾರಗಳು ರಾಜ್ಯದ ಯೋಜನೆಗಳಿಗೆ ಒಪ್ಪಿಗೆ ಸೂಚಿಸುವಂತೆ ಮಾಡಬೇಕು ಎಂದು ಗೌರವ್ ಗುಪ್ತ ಹೇಳಿದರು.

ಇದೇ ವೇಳೆ ಮಾತನಾಡಿದ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ, 2024-25ನೇ ಸಾಲಿಗೆ ಸಂಬಂಧಿಸಿದಂತೆ ಪಿಎಂಕೆಎಸ್‍ವೈ ಯೋಜನೆಯಡಿ 1036 ಯೋಜನೆಗಳಿಗೆ 2434 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ನೀಡಬೇಕು. ಅಷ್ಟೇ ಅಲ್ಲ ರಾಜ್ಯ ಸರಕಾರದ ಪ್ರಸ್ತಾವಿತ ಹೊಸ 172 ಹೊಸ ಯೋಜನೆಗಳಿಗೆ 475 ಕೋಟಿ ರೂ.ಬರಬೇಕಾಗಿದೆ. ಕೇಂದ್ರ ಸರಕಾರ ಸಕಾಲದಲ್ಲಿ ಹಣ ಬಿಡುಗಡೆ ಮಾಡದ ಕಾರಣ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದ ಯೋಜನೆಗಳಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

ರೈಲ್ವೆ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ: ಕೇಂದ್ರ ಸರಕಾರ ರೈಲ್ವೆ ಯೋಜನೆಗಳಿಗೆ ತನ್ನ ಬಜೆಟ್ ನಲ್ಲಿ ಪ್ರಸಕ್ತ ಸಾಲಿನಲ್ಲಿ 2.5 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ರಾಜ್ಯದ ರೈಲ್ವೆ ಯೋಜನೆಗಳಿಗೆ ಯಾವುದೇ ರೀತಿ ಹಣಕಾಸಿನ ಕೊರತೆ ಇಲ್ಲ. ಅದೇ ರೀತಿ ಕೇಂದ್ರ ಭೂಸಾರಿಗೆ ಹಾಗೂ ರಸ್ತೆ ಅಭಿವೃದ್ಧಿ ಇಲಾಖೆಯು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೆ ಅಗತ್ಯದಷ್ಟು ಹಣವನ್ನು ಬಿಡುಗಡೆ ಮಾಡುತ್ತಿದೆ. ಈ ಎರಡು ಇಲಾಖೆಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಣಕಾಸಿನ ಕೊರತೆ ಇಲ್ಲ ಎಂದು ಗೌರವ್ ಗುಪ್ತ ಹೇಳಿದರು.

ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶಾಂತಕುಮಾರ್ ಮಾತನಾಡಿ, ರಾಜ್ಯದಲ್ಲಿ 28 ರಾಷ್ಟ್ರಿಯ ಹೆದ್ದಾರಿಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. 13 ಕೈಗಾರಿಕಾ ವಲಯಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಿದ್ದು ಅವುಗಳನ್ನು ಸಹ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ. ಕೇಂದ್ರ ಸರಕಾರ ನಿಗದಿತ ಸಮಯದಲ್ಲಿ ಹಣ ಬಿಡುಗಡೆ ಮಾಡುತ್ತಿದೆ. ಕೆಲವು ಭಾಗಗಳಲ್ಲಿ ಭೂಸ್ವಾಧೀನ ಸಮಸ್ಯೆಯಾಗಿದ್ದು, ಕೆಲವು ಕಡೆ ರಸ್ತೆ ಅಭಿವೃದ್ಧಿ ಯೋಜನೆ ನಿಧನವಾಗುತ್ತಿದೆ ಎಂದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಮಾತನಾಡಿ, ಕೇಂದ್ರ ಸರಕಾರದ ಅಮೃತ್ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಒಂದು ಹಾಗೂ ಎರಡು ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರಕಾರಕ್ಕೆ 5000 ಕೋಟಿ ರೂಪಾಯಿಗಳ ಅನುದಾನವನ್ನ ಐದು ವರ್ಷಗಳ ಅವಧಿಗೆ ಕೇಂದ್ರ ಸರಕಾರ ನೀಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವು ನಗರ ಪ್ರದೇಶಗಳಲ್ಲಿ ಸ್ಥಳೀಯ ಸಮಸ್ಯೆಗಳಿಂದ ಕೆಲವು ಕಾಮಗಾರಿಗಳು ವಿಳಂಬವಾಗುತ್ತಿದೆ ಎಂದು ಸಭೆಯಲ್ಲಿ ಹೇಳಿದರು .

ಸಭೆಯಲ್ಲಿ ಮಾತನಾಡಿದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕಲಬುರಗಿ, ಹಿರಿಯೂರು, ಜೇವರ್ಗಿ, ಮಾಲೂರು ಹಾಗೂ ಕೆ.ಆರ್.ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಪುಡ್ ಪಾರ್ಕ್ ಗಳ ಕಾಮಗಾರಿಗಳು ದಶಕದಿಂದ ನೆನೆಗುದಿಗೆ ಬಿದ್ದಿದೆ. ಅವುಗಳಿಗೆ ಅಗತ್ಯ ಹಣಕಾಸಿನ ನೆರವನ್ನು ನೀಡಿ ಯೋಜನೆಗಳನ್ನು ಪೂರ್ಣಗೊಳಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು. ಜಲಜೀವನ ಮಿಷನ್ ಯೋಜನೆಗೆ ಕೇಂದ್ರ ಸರಕಾರದಲ್ಲಿ ಬಾಕಿ ಇರುವ ಹಣ ತರಲು ಕೇಂದ್ರ ಸಚಿವರ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.

ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಮಾತನಾಡಿ, ರಾಜ್ಯದ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿರುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಬೇಕು. ಕೇಂದ್ರ ಸರಕಾರದಿಂದ ಯಾವುದೇ ಯೋಜನೆಗಳಿಗೆ ಅನುದಾನ ನೀಡುವುದು ಬಾಕಿ ಇದ್ದರೆ ತಮ್ಮ ಗಮನಕ್ಕೆ ತಂದರೆ ತಾವು ಹಾಗೂ ಜಯಚಂದ್ರ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಿಕೊಡಿಸುವುದಾಗಿ ಹೇಳಿದರು.

ಸಂಪೂರ್ಣ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರ ಸರಕಾರದ ಅನುದಾನ ಹಂಚಿಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದ ಯೋಜನೆಗಳಿಗೆ ಕೇಂದ್ರ ಸರಕಾರದ ಪಾಲಿನ ಅನುದಾನ ಹಂಚಿಕೆ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆಯಲಾಯಿತು.

ಸಭೆಯಲ್ಲಿ ಸಣ್ಣ ಕೈಗಾರಿಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ರಾಜೇಂದ್ರ, ಕೃಷ್ಣಭಾಗ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕ ಮೋಹನ್ ರಾಜ್ ಕೆ.ಪಿ. ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News