×
Ad

ಜನಾಕ್ರೋಶವನ್ನು ಅಣಕಿಸಲು ಸರಕಾರದ ಸಂಭ್ರಮಾಚರಣೆ: ಆರ್.ಅಶೋಕ್ ಲೇವಡಿ

Update: 2025-05-14 21:57 IST

 ಆರ್.ಅಶೋಕ್

ಬೆಂಗಳೂರು : ‘ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಜನಾಕ್ರೋಶವನ್ನ ಅಣಕಿಸುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಯಾವ ಸಾಧನೆಗೆ ಈ ಎರಡು ವರ್ಷದ ಸಂಭ್ರಮ? ಸಿಎಂ ಸಿದ್ದರಾಮಯ್ಯನವರೇ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ. ಸರಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ ಎಂಬ ಹಾಸ್ಯಾಸ್ಪದ, ನಾಚಿಕೆಗೇಡು ಸುದ್ದಿ ಕಣ್ಣಿಗೆ ಬಿತ್ತು. ನಿಮ್ಮ ಸರಕಾರದ 2 ವರ್ಷಗಳಲ್ಲಿ ಏನು ಸಾಧನೆ ಮಾಡಿದೆ ಎಂದು ಈ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

‘ಹಾಲು, ನೀರು, ಕರೆಂಟು, ಪೆಟ್ರೋಲು, ಡಿಸೇಲ್, ಆಸ್ತಿ ತೆರಿಗೆ, ಹೀಗೆ ಎಲ್ಲ ದಿನಬಳಕೆ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆ ಮಾಡಿ ಬಡವರು ಮಧ್ಯಮ ವರ್ಗದ ಜೇಬಿಗೆ ಕತ್ತರಿ ಹಾಕಿದ್ದಕ್ಕೆ ಈ ಸಂಭ್ರಮಾಚರಣೆನಾ?. ಪರಿಶಿಷ್ಟ ಸಮುದಾಯಗಳಿಗೆ ಸೇರಬೇಕಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಲೂಟಿ ಹೊಡೆದಿರುವ ಖುಷಿಗೆ ಸಂಭ್ರಮಾಚರಣೆನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ನಾಮಕಾವಸ್ತೆ ತನಿಖೆ ಮಾಡಿಸಿ ಬಿ-ರಿಪೋರ್ಟ್ ಹಾಕಿಸಿಕೊಂಡು ಕ್ಲೀನ್‍ಚೀಟ್ ಪಡೆದ ಸಾಧನೆಗೆ ಈ ಸಂಭ್ರಮಾಚರಣೆನಾ?. ಕಾಂಗ್ರೆಸ್ ಸರಕಾರದ ಕಿರುಕುಳ, ಕಮಿಷನ್ ದಾಹಕ್ಕೆ ಬಲಿಯಾದ ಪ್ರಾಮಾಣಿಕ ಅಧಿಕಾರಿಗಳು ಹಾಗು ಗುತ್ತಿಗೆದಾರರ ಸಾವನ್ನ ಸಂಭ್ರಮಿಸಲು ಸಂಭ್ರಮಾಚರಣೆನಾ?, ಕಳಪೆ ಔಷಧಿ ಪೂರೈಕೆಯಿಂದ 460ಕ್ಕೂ ಹೆಚ್ಚು ಬಾಣಂತಿಯರು ಆಸ್ಪತ್ರೆಯಲ್ಲೇ ತೀರಿಕೊಂಡರಲ್ಲ ಅದಕ್ಕೆ ಸಂಭ್ರಮಾಚರಣೆನಾ? ಎಂದು ಅವರು ಕೇಳಿದ್ದಾರೆ.

24 ತಿಂಗಳಲ್ಲಿ 1600ಕ್ಕು ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರಲ್ಲ ಅದಕ್ಕೆ ಸಂಭ್ರಮಾಚರಣೆನಾ?. ವಕ್ಫ್ ಮಂಡಳಿ ಹೆಸರಿನಲ್ಲಿ ಮಠ, ಮಂದಿರಗಳು, ರೈತರ ಜಮೀನು ಕಬಳಿಸಿದ ಸಾಧನೆಗೆ ಸಂಭ್ರಮಾಚರಣೆನಾ?. ಕೆಪಿಎಸ್ಸಿ ಪರೀಕ್ಷೆಯಲ್ಲಿ ಎಡವಟ್ಟುಗಳು ಮೇಲೆ ಎಡವಟ್ಟುಗಳು ಮಾಡಿ ಲಕ್ಷಾಂತರ ಯುವಕರ ಕನಸು ನುಚ್ಚು ನೂರು ಮಾಡಿ ಅವರ ಭವಿಷ್ಯ ಹಾಳು ಮಾಡಿದ್ದಕ್ಕೆ ಸಂಭ್ರಮಾಚರಣೆನಾ? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಕಾರಣದಿಂದ ನೇಹಾ ಕೊಲೆ ಪ್ರಕರಣದಿಂದ ಹಿಡಿದು, ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದವರೆಗೆ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಹಿಂದೂಗಳ ಸರಣಿ ಕೊಲೆ ಬಗ್ಗೆ ಸಂಭ್ರಮಾಚರಣೆನಾ?. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಗಣೇಶನ ಮೂರ್ತಿಯನ್ನು ಪೊಲೀಸ್ ವ್ಯಾನ್ ಹತ್ತಿಸಿದ್ದಕ್ಕೆ ಸಂಭ್ರಮಾಚರಣೆನಾ?. ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ಹೇಳಿ ಪಾಕಿಸ್ತಾನದ ಟಿವಿಗಳಲ್ಲಿ ಮಿಂಚಿದ್ದಕ್ಕೆ ಈ ಸಂಭ್ರಮಾಚರಣೆನಾ? ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News