×
Ad

ತಿಮ್ಮರಾಜನಹಳ್ಳಿಯಿಂದ ತಾವರೆಕೆರೆಯವರೆಗೆ ಬ್ರಾಡ್ ಗೇಜ್ ರೈಲ್ವೆ ಕಾಮಗಾರಿ | ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಜೊತೆ ಸಭೆ : ಟಿ.ಬಿ.ಜಯಚಂದ್ರ

Update: 2025-05-14 22:14 IST

ಬೆಂಗಳೂರು: ಉದ್ದೇಶಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ಬ್ರಾಡ್ ಗೇಜ್ ರೈಲ್ವೆ ಮಾರ್ಗದಲ್ಲಿ ತಿಮ್ಮರಾಜನಹಳ್ಳಿಯಿಂದ ತಾವರೆಕೆರೆಯ ವರೆಗೆ 498 ಕೋಟಿ ರೂ.ವೆಚ್ಚದ ಕಾಮಗಾರಿಗೆ ಒಪ್ಪಂದ ಏರ್ಪಟ್ಟಿದ್ದು, ಶಿರಾ ಸೇರಿದಂತೆ ನಾಲ್ಕು ಕಡೆಗಳಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ರಾಜ್ಯ ಸರಕಾರದ ಹೊಸದಿಲ್ಲಿಯ ವಿಶೇಷ ಪ್ರತಿನಿಧಿ ಟಿ.ವಿ.ಜಯಚಂದ್ರ ಹೇಳಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಒಟ್ಟು 41 ಕಿ.ಮೀ. ಉದ್ದದ ಈ ಕಾಮಗಾರಿಗೆ ಫರೀದಾಬಾದ್‍ನ ಮೆಸರ್ಸ್ ಕೆ.ಆರ್.ಸಿ.ಆಲ್ಟಿಸ್ ಜಾಯಿಂಟ್ ವೆಂಚರ್ ಎಂಬ ಏಜೆನ್ಸಿಯೊಂದಿಗೆ ಒಪ್ಪಂದವಾಗಿದ್ದು, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ ಮತ್ತು ತಾವರೆಕೆರೆಯಲ್ಲಿ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ. ಒಟ್ಟು 11 ದೊಡ್ಡ ಸೇತುವೆಗಳು, 55 ಕಿರುಸೇತುವೆ-ಕಲ್ವರ್ಟ್‍ಗಳು, 35 ಓವರ್ ಬ್ರಿಜ್ ಹಾಗೂ 35 ಅಂಡರ್ ಬ್ರಿಜ್‍ಗಳು ಕಾಮಗಾರಿಯ ಭಾಗವಾಗಿರುತ್ತವೆ ಎಂದು ವಿವರಿಸಿದ್ದಾರೆ.

ಈ ರೈಲು ಮಾರ್ಗವು ಶಿರಾ ಕ್ಷೇತ್ರದಲ್ಲಿ ಸೀಬಿಯಿಂದ ಆರಂಭವಾಗಿ ಧರ್ಮಪುರದ ಮೂಲಕ 41 ಕಿ.ಮೀ. ಉದ್ದಕ್ಕೆ ಹಾದುಹೋಗುತ್ತದೆ. ಇದರಿಂದ ಶಿರಾ ತಾಲೂಕಿನಲ್ಲಿ ಶೇಂಗಾ, ತೆಂಗಿನಕಾಯಿ, ಅಡಿಕೆ, ಹುಣಸೆ ಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳನ್ನು ಬೆಳೆಯುವ ರೈತರಿಗೆ ಉತ್ಪನ್ನಗಳ ಸಾಗಣೆ ಹಾಗೂ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜೊತೆಗೆ, ಈ ಭಾಗದ ಜನಸಾಮಾನ್ಯರಿಗೆ ದಾವಣಗೆರೆ ಮತ್ತು ಬೆಂಗಳೂರಿಗೆ ಹೋಗುವುದು ಇನ್ನಷ್ಟು ಸುಲಭವಾಗುತ್ತದೆ ಎಂದು ಜಯಚಂದ್ರ ಹೇಳಿದ್ದಾರೆ.

ಈ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಶಿರಾದಲ್ಲಿ ತಾವು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಶಿರಾ ಆಸುಪಾಸಿನಲ್ಲಿ ಈಗ ಐದು ರಾಷ್ಟ್ರೀಯ ಹೆದ್ದಾರಿಗಳಿದ್ದು, ಜೊತೆಗೆ ಈ ರೈಲ್ವೆ ಮಾರ್ಗವೂ ಬಳಕೆಗೆ ಸಿದ್ಧಗೊಂಡರೆ ಅತ್ಯುತ್ತಮ ಉತ್ತಮ ಸಂಪರ್ಕ ವ್ಯವಸ್ಥೆ ದೊರೆಯುತ್ತದೆ ಎಂದು ಹೇಳಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News